ADVERTISEMENT

ಮಾಜಿ ರಾಜ್ಯಪಾಲರಿಂದ ಗಂಭೀರ ಆರೋಪ: ಗೋವಾ ಸಿಎಂ ಸಾವಂತ್‌ ರಾಜೀನಾಮೆಗೆ ಆಗ್ರಹ

ಮಾಜಿ ರಾಜ್ಯಪಾಲರಿಂದ ಆಪಾದನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 19:45 IST
Last Updated 26 ಅಕ್ಟೋಬರ್ 2021, 19:45 IST
ಸಾವಂತ್‌
ಸಾವಂತ್‌   

ಪಣಜಿ: ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮತ್ತು ಅವರ ಸಂಪೂರ್ಣ ಸಂಪುಟ ರಾಜೀನಾಮೆ ನೀಡಬೇಕೆಂದು ಗೋವಾದ ವಿಪಕ್ಷಗಳು ಆಗ್ರಹಿಸಿವೆ. ಅಧಿಕಾರರೂಢ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಗೋವಾದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ ಕಾರಣ ಈ ಬೆಳವಣಿಗೆ ನಡೆದಿದೆ.

ವಿಪಕ್ಷಗಳಾದ ಟಿಎಂಸಿ ಮತ್ತು ಗೋವಾ ಫಾರ್ವರ್ಡ್‌ನ ಮುಖಂಡರು ಈಗಿನ ರಾಜ್ಯಪಾಲರಾದ ಪಿ.ಎಸ್‌. ಶ್ರೀಧರನ್‌ ಪಿಳ್ಳೈ ಅವರನ್ನು ಭೇಟಿಯಾಗಿ ಸಾವಂತ್‌ ರಾಜೀನಾಮೆ ಪಡೆಯುವಂತೆ ಮನವಿ ಮಾಡಿದರು. ಇದೇ ವೇಳೆ, ಸಾವಂತ್‌ರ ರಾಜೀನಾಮೆ ಆಗ್ರಹಿಸಿ ಪಣಜಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಆಮ್‌ ಆದ್ಮಿ ಪಕ್ಷದ 10ಕ್ಕಿಂತಲೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಗೋವಾದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಮೊದಲ ಲಾಕ್‌ಡೌನ್‌ ವೇಳೆಯಲ್ಲಿ ಜನರಿಗೆ ಹಂಚಬೇಕಿದ್ದ ಅಗತ್ಯ ವಸ್ತುಗಳಲ್ಲೂ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದು ಈಗ ಮೇಘಾಲಯ ರಾಜ್ಯಪಾಲರಾಗಿರುವ ಮಲಿಕ್‌ ಅವರು ಸುದ್ದಿ ವಾಹಿನಿಯೊಂದಕ್ಕೆ ಸೋಮವಾರ ಹೇಳಿದ್ದರು.

ADVERTISEMENT

ಗೋವಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಾಮು ನಾಯಕ್‌ ಅವರುಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಸಾಂವಿಧಾನಿಕ ಹುದ್ದೆಯಲ್ಲಿ ಇದ್ದು ನಮ್ಮ ಸರ್ಕಾರವನ್ನು ದೂಷಿಸಬೇಡಿ. ಮೊದಲು ನಿಮ್ಮ ಹುದ್ದೆಗೆ ರಾಜೀನಾಮೆ ನೀಡಿ, ನಂತರ ಏನು ಹೇಳಬೇಕು ಎಂದಿರುವಿರೋ ಅದನ್ನು ಹೇಳಿ’ ಎಂದು ಮಲಿಕ್ ಅವರಿಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.