ಶ್ರೀಲೈರಾಯಿ ದೇವಿ ಜಾತ್ರೆ
ಪಣಜಿ: ಗೋವಾದ ಶಿರ್ಗಾಂವ್ ದೇವಾಲಯದಲ್ಲಿ ಶುಕ್ರವಾರ ನಡೆದ ವಾರ್ಷಿಕ ಜಾತ್ರೆ (ಮೆರವಣಿಗೆ) ವೇಳೆ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 6 ಜನ ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ದಕ್ಷಿಣ ಗೋವಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗೋವಾ ಸರ್ಕಾರ ತಿಳಿಸಿದೆ.
ಕಾಲ್ತುಳಿತಕ್ಕೆ ಕಾರಣ...
ಶನಿವಾರ ಮುಂಜಾನೆ 4.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಜಾತ್ರೆಯಲ್ಲಿ ಸಾಕಷ್ಟು ಜನಜಂಗುಳಿ ಇತ್ತು. ಭಕ್ತರೊಬ್ಬರಿಗೆ ವಿದ್ಯುತ್ ತಂತಿಯಿಂದ ಶಾಕ್ ಹೊಡೆದ ಪರಿಣಾಮ ನೂಕು ನುಗ್ಗುಲು ಉಂಟಾಯಿತು. ಈ ವೇಳೆ ಆತಂಕಗೊಂಡ ಭಕ್ತರು ಸುರಕ್ಷಿತ ಸ್ಥಳಕ್ಕೆ ತೆರಳಲು ಯತ್ನಿಸಿದ್ದರಿಂದ ಕಾಲ್ತುಳಿತ ಉಂಟಾಯಿತು ಎಂದು ಸ್ಥಳದಲ್ಲಿದ್ದ ಭಕ್ತರೊಬ್ಬರು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಭದ್ರತೆ ಕೊರತೆ...
ಭಕ್ತರನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇರಲಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಮ್‌ಗಾರ್ಡ್ ಅಥವಾ ಪೊಲೀಸರನ್ನು ನಿಯೋಜನೆ ಮಾಡಿರಲಿಲ್ಲ ಎಂದು ಅವರು ಹೇಳಿದ್ದಾರೆ.
ದೇವರ ದರ್ಶನ ಪಡೆಯಲು ಭಕ್ತರು ಸರದಿ ಸಾಲಿನಲ್ಲಿ ಹೋಗಲು ಸಾಧ್ಯವಾಗಿರಲಿಲ್ಲ, ನೂಕು ನುಗ್ಗಲಿನಲ್ಲಿ ಭಕ್ತರು ದೇವರ ದರ್ಶನ ಪಡೆಯುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಿಎಂ ಪ್ರಮೋದ್ ಸಾವಂತ್ ಸಂತಾಪ..
ಲೈರಾಯಿ ದೇವಿ ಜಾತ್ರೆಯಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ ಆಘಾತ ತಂದಿದೆ. ಈ ಘಟನೆ ತೀವ್ರ ನೋವುಂಟು ಮಾಡಿದೆ. ಮೃತರ ಕುಟುಂಬದ ಜೊತೆ ಸರ್ಕಾರವಿದೆ. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದೇನೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಮಾಹಿತಿ ಪಡೆದಿದ್ದಾರೆ. ಕೇಂದ್ರದಿಂದ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಸಿಎಂ ಪ್ರಮೋದ್ ಸಾವಂತ್ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.