ADVERTISEMENT

ಚಿರತೆ ದಾಳಿ ತಡೆಯಲು ಕಾಡಿಗೆ ಆಡು ಬಿಡಿ: ಮಹಾರಾಷ್ಟ್ರ ಅರಣ್ಯ ಸಚಿವ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 15:16 IST
Last Updated 9 ಡಿಸೆಂಬರ್ 2025, 15:16 IST
   

ನಾಗಪುರ: ‘ಚಿರತೆಗಳು ಆಹಾರ ಅರಸುತ್ತಾ ವಸತಿ ಪ್ರದೇಶಗಳಿಗೆ ಬರುವುದನ್ನು ನಿಯಂತ್ರಿಸಲು ಅರಣ್ಯ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಡುಗಳನ್ನು ಬಿಡುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಮಹಾರಾಷ್ಟ್ರ ಅರಣ್ಯ ಸಚಿವ ಗಣೇಶ್ ನಾಯಕ್ ತಿಳಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯ ಅಧಿವೇಶನದಲ್ಲಿ ಎನ್‌ಸಿಪಿ (ಎಸ್‌ಪಿ) ಶಾಸಕ ಜಿತೇಂದ್ರ ಅವಾದ್ ಅವರು ರಾಜ್ಯದಲ್ಲಿ ಚಿರತೆ ದಾಳಿ ಪ್ರಕರಣಗಳು ಹೆಚ್ಚಿರುವ ಕುರಿತು ಎತ್ತಿದ ಗಮನ ಸೆಳೆಯುವ ನಿಲುವಳಿ ಸೂಚನೆಗೆ ಗಣೇಶ್ ನಾಯಕ್ ಈ ರೀತಿ ಪ್ರತಿಕ್ರಿಯಿಸಿದರು.

‘ಚಿರತೆ ದಾಳಿಯಲ್ಲಿ ನಾಲ್ವರು ಸಾವಿಗೀಡಾದರೆ ಸರ್ಕಾರ ₹ 1 ಕೋಟಿ ಪರಿಹಾರ ನೀಡಬೇಕು. ಪರಿಹಾರ ನೀಡುವ ಬದಲು ಇಷ್ಟೇ ಹಣದಲ್ಲಿ ಆಡುಗಳನ್ನು ಖರೀದಿಸಿ ಅರಣ್ಯಕ್ಕೆ ಬಿಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಾವಿನ ನಂತರ ಪರಿಹಾರ ನೀಡುವ ಬದಲು, ಚಿರತೆಗಳು ವಸತಿ ಪ್ರದೇಶಕ್ಕೆ ಬರದಂತೆ ತಡೆಯಲು ₹ 1 ಕೋಟಿ ಮೌಲ್ಯದ ಮೇಕೆಗಳನ್ನು ಕಾಡಿಗೆ ಬಿಡಿ’ ಎಂದು ಹೇಳಿರುವುದಾಗಿ ಸಚಿವರು ತಿಳಿಸಿದರು. 

ADVERTISEMENT

‘ಚಿರತೆಗಳ ನಡವಳಿಕೆ ಮತ್ತು ಜೀವನ ವಿಧಾನ ಬದಲಾಗಿದೆ. ಮೊದಲು ಚಿರತೆಗಳನ್ನು ಅರಣ್ಯ ಪ್ರಾಣಿಗಳೆಂದು ಹೇಳಲಾಗುತ್ತಿತ್ತು. ಆದರೆ, ಈಗ ಅವುಗಳ ಆವಾಸಸ್ಥಾನವು ಕಬ್ಬು ಬೆಳೆಯುವಂತಹ ಹೊಲಗಳಿಗೆ ಸ್ಥಳಾಂತರಗೊಂಡಿದೆ. ರಾಜ್ಯದಲ್ಲಿ ಅಹಲ್ಯಾನಗರ, ಪುಣೆ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಚಿರತೆ ದಾಳಿಗೆ ಸಂಬಂಧಿಸಿದ ಘಟನೆಗಳು ವರದಿಯಾಗುತ್ತಿವೆ’ ಎಂದು ಸಚಿವರು ತಿಳಿಸಿದರು.