ADVERTISEMENT

ತಡೆಯಾಜ್ಞೆಗೆ ‘ಸುಪ್ರೀಂ’ ನಿರಾಕರಣೆ

ಗೋಕರ್ಣ ದೇವಸ್ಥಾನದ ಹಸ್ತಾಂತರ: ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2018, 20:30 IST
Last Updated 7 ಸೆಪ್ಟೆಂಬರ್ 2018, 20:30 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ ರಾಜ್ಯ ಸರ್ಕಾರದ ಕ್ರಮವನ್ನು ರದ್ದುಪಡಿಸಿದ್ದ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಗೆ ವಹಿಸುವ ವಿಚಾರದಲ್ಲಿ ಹೈಕೋರ್ಟ್‌ ಈ ವರ್ಷದ ಆಗಸ್ಟ್‌ 10ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್‌ ಅರ್ಜಿಯ ಕುರಿತು ಎಂಟು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರ, ಟ್ರಸ್ಟಿಗಳು ಹಾಗೂ ಸಂಬಂಧಪಟ್ಟವರಿಗೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ನೋಟಿಸ್ ಜಾರಿ ಮಾಡಿದೆ.

ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮಠದ ಪರ ವಕೀಲರು ಮನವಿ ಮಾಡಿದರೆ, ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಜೋಸೆಫ್ ಅರಿಸ್ಟಾಟಲ್ ಪೀಠಕ್ಕೆ ಅವರು ವಿವರ ನೀಡಿದರು.

ADVERTISEMENT

‘ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡುವ ಮೊದಲು ನಿರ್ವಹಣೆ ಯಾರ
ಸುಪರ್ದಿಯಲ್ಲಿತ್ತು’ ಎಂದು ಪೀಠವು ಪ್ರಶ್ನಿಸಿತು.

ಪ್ರಕರಣದ ವಿಚಾರಣೆ ನಡೆಸುವುದಕ್ಕೆ ಸಮ್ಮತಿ ಸೂಚಿಸಿತಲ್ಲದೆ, ರಿಟ್‌ ಅರ್ಜಿ ಸಲ್ಲಿಸಿರುವ ಶ್ರೀ ಬಾಲಚಂದ್ರ ವಿಘೇಶ್ವರ ದೀಕ್ಷಿತ್ ಮತ್ತಿತರರಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಆದೇಶ ನೀಡುವವರೆಗೂ ಹೈಕೋರ್ಟ್‌ನ ಮಧ್ಯಂತರ ಆದೇಶ ಪಾಲನೆಗೆ ಸೂಚಿಸಿದ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್‌ ಹಾಗೂ ಡಿ.ಎಂ. ಚಂದ್ರಚೂಡ್‌ ಅವರನ್ನು ಒಳಗೊಂಡ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿದೆ.

**

ಆಡಳಿತಾಧಿಕಾರ ಆಬಾಧಿತ

ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶವನ್ನು ಮುಂದಿನ ಆದೇಶದವರೆಗೂ ಮುಂದುವರಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಇದರಿಂದಾಗಿ ಶ್ರೀಮಠಕ್ಕಿರುವ ದೇವಾಲಯದ ನಿರ್ವಹಣಾಧಿಕಾರ ಆಬಾಧಿತವಾಗಿ ಮುಂದುವರಿಯಲಿದೆ ಎಂದು ರಾಮಚಂದ್ರಾಪುರ ಮಠ ಪ್ರತಿಕ್ರಿಯೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.