ADVERTISEMENT

ವೈಟ್‌ಫೀಲ್ಡ್‌ ಬಳಿ ಶೀಘ್ರ ಚಿನ್ನ ಶುದ್ಧೀಕರಣ ಘಟಕ

ಅನ್ನಪೂರ್ಣ ಸಿಂಗ್
Published 2 ಮೇ 2019, 18:37 IST
Last Updated 2 ಮೇ 2019, 18:37 IST
   

ನವದೆಹಲಿ: ಬೆಂಗಳೂರು ಸಮೀಪದ ವೈಟ್‌ಫೀಲ್ಡ್‌ನಲ್ಲಿ ದೇಶದ ಅತಿದೊಡ್ಡ ಚಿನ್ನ ಶುದ್ಧೀಕರಣ ಘಟಕವು ಈ ವರ್ಷಾಂತ್ಯದಲ್ಲಿ ಕಾರ್ಯಾರಂಭ ಮಾಡಲಿದೆ.

ಚಿನ್ನಾಭರಣ ತಯಾರಿಕಾ ಸಂಸ್ಥೆಯಾಗಿರುವ ರಾಜೇಶ್‌ ಎಕ್ಸ್‌ಪೋರ್ಟ್ಸ್‌ ತನ್ನ ಈ ಚಿನ್ನ ಶುದ್ಧೀಕರಣ ಘಟಕ ಸ್ಥಾಪನೆಗೆ ₹ 350 ಕೋಟಿ ಹೂಡಿಕೆ ಮಾಡಲಿದೆ. ಈ ಘಟಕ ವಾರ್ಷಿಕ 600 ಟನ್‌ ಚಿನ್ನ ಶುದ್ಧೀಕರಣದ ಸಾಮರ್ಥ್ಯ ಹೊಂದಿದೆ. ಇದು ಭಾರತದಲ್ಲಿ ಪ್ರತಿ ವರ್ಷ ಬಳಕೆಯಾಗುವ ಚಿನ್ನದ ಶೇ 75ರಷ್ಟಿದೆ.

ಚಿನ್ನ ಬಳಕೆ ಪ್ರಮಾಣದಲ್ಲಿ ವಿಶ್ವದಲ್ಲಿಯೇ ಎರಡನೆ ಅತಿದೊಡ್ಡ ದೇಶವಾಗಿರುವ ಭಾರತದಲ್ಲಿ, ಈ ಘಟಕ ಕಾರ್ಯಾರಂಭ ಮಾಡಿದ ನಂತರ ವಾರ್ಷಿಕ ಚಿನ್ನ ಆಮದಿಗೆ ಮಾಡುವ ವೆಚ್ಚದಲ್ಲಿ ಶೇ 2ರಷ್ಟು ಉಳಿತಾಯ ಸಾಧ್ಯವಾಗಲಿದೆ.

ADVERTISEMENT

‘ಸದ್ಯಕ್ಕೆ ನಾವು ವಿಶ್ವದ ವಿವಿಧ ಭಾಗಗಳಲ್ಲಿ ಇರುವ ಗಣಿಗಳಿಂದ ಚಿನ್ನ ಆಮದು ಮಾಡಿಕೊಂಡು ಶುದ್ಧೀಕರಣಗೊಳಿಸುತ್ತೇವೆ. ಈ ಘಟಕ ಕಾರ್ಯಾರಂಭ ಮಾಡಿದ ನಂತರ ಚಿನ್ನದ ಶುದ್ಧೀಕರಣ ಮತ್ತು ಬ್ರ್ಯಾಂಡಿಂಗ್‌ ಶುಲ್ಕದಲ್ಲಿ ಉಳಿತಾಯವಾಗಲಿದೆ’ ಎಂದು ರಾಜೇಶ್‌ ಎಕ್ಸ್‌ಪೋರ್ಟ್ಸ್‌ನ ಅಧ್ಯಕ್ಷ ರಾಜೇಶ್‌ ಮೆಹ್ತಾ ಹೇಳಿದ್ದಾರೆ.

ರಾಜೇಶ್‌ ಎಕ್ಸ್‌ಪೋರ್ಟ್ಸ್‌, ವಿಶ್ವದ ಅತಿದೊಡ್ಡ ಚಿನ್ನ ಶುದ್ಧೀಕರಣ ಸಂಸ್ಥೆ ವಾಲ್ಕಂಬಿಯನ್ನು 2015ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಭಾರತ ಮತ್ತು ವಿದೇಶಗಳಲ್ಲಿನ ರಾಜೇಶ್ ಎಕ್ಸ್‌ಪೋರ್ಟ್‌ನ ಚಿನ್ನ ಶುದ್ಧೀಕರಣ ಸಾಮರ್ಥ್ಯವು ವಾರ್ಷಿಕ 2,400 ಟನ್‌ಗಳಷ್ಟಿದೆ. ಸಂಸ್ಥೆಯು ಶುದ್ಧೀಕರಿಸಿದ ಚಿನ್ನವನ್ನು ಚಿನ್ನ ವಹಿವಾಟುದಾರರಿಗೆ ಪೂರೈಸುತ್ತಿದೆ. ಅಂತಿಮವಾಗಿ ಅದು ಚಿನ್ನಾಭರಣ ತಯಾರಕರ ಕೈ ಸೇರುತ್ತಿದೆ.

ಆಮದು ಅವಲಂಬನೆ: ದೇಶದಲ್ಲಿ ಚಿನ್ನದ ಗಣಿಗಾರಿಕೆಗೆ ಸೀಮಿತ ಅವಕಾಶಗಳಿವೆ. ದೇಶಿ ಚಿನ್ನದ ಬೇಡಿಕೆಯ ಬಹುಭಾಗವನ್ನು ಆಮದು ಪೂರೈಸುತ್ತಿದೆ. ಆಮದು ಸುಂಕ (ಶೇ 10 ) ಮತ್ತು ಶೇ 3ರಷ್ಟು ಜಿಎಸ್‌ಟಿಯಿಂದ ಇತರ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.