ADVERTISEMENT

ಸುಲಿಗೆ ಪ್ರಕರಣ: ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಪೋಷಕರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 2:40 IST
Last Updated 27 ಜನವರಿ 2026, 2:40 IST
   

ಚಂಡೀಗಢ: ವಿದೇಶದಲ್ಲಿ ನೆಲೆಸಿರುವ ಭಾರತ ಮೂಲದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಅವರ ಪೋಷಕರನ್ನು ಸುಲಿಗೆ ಆರೋಪದಡಿ ಪಂಜಾಬ್‌ನ ಮುಕ್ತಸರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ರಾರ್ ತಂದೆ ಶಂಶೀರ್ ಸಿಂಗ್ ಮತ್ತು ತಾಯಿ ಪ್ರೀತ್‌ಪಾಲ್ ಕೌರ್ ಅವರನ್ನು ಮುಕ್ತಸರದ ಆದೇಶನಗರದ ಮನೆಯಿಂದ ಬಂಧಿಸಲಾಗಿದೆ ಎಂದು ಎಸ್ಎಸ್‌ಪಿ ಅಭಿಮನ್ಯು ರಾಣಾ ಹೇಳಿದ್ದಾರೆ.

ಇವರು ಮೂಲತಃ ಫರೀದ್‌ಕೋಟ್ ಜಿಲ್ಲೆಯವರಾಗಿದ್ದು, 2024ರಲ್ಲಿ ಮುಕ್ತಸರದ ವ್ಯಕ್ತಿಯೊಬ್ಬರು ಸುಲಿಗೆ ಪ್ರಕರಣ ದಾಖಲಿಸದ್ದರು ಎಂದು ಅವರು ಹೇಳಿದ್ದಾರೆ.

ADVERTISEMENT

2022ರಲ್ಲಿ ನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳ ಪೈಕಿ ಗೋಲ್ಡಿ ಬ್ರಾರ್ ಸಹ ಒಬ್ಬರು. ಸಿಧು ಹತ್ಯೆ ಪ್ರಕರಣದ ಹೊಣೆಯನ್ನು ಬ್ರಾರ್ ಹೊತ್ತುಕೊಂಡಿದ್ದನು.

ಪಂಜಾಬ್‌ನಲ್ಲಿ ಗ್ಯಾಂಗ್‌ಸ್ಟರ್‌ಗಳ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿರುವ ಬೆನ್ನಲ್ಲೇ ಈ ಬಂಧನವಾಗಿದೆ.

ಈ ಕಾರ್ಯಾಚರಣೆಯ ಅಡಿಯಲ್ಲಿ, ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 60 ವಿದೇಶಿ ಮೂಲದ ಗ್ಯಾಂಗ್‌ಸ್ಟರ್‌ಗಳ 1,200 ಸಹಚರರು ಮತ್ತು ಅವರ 600 ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಹೊಂದಿದ ಸ್ಥಳಗಳನ್ನು ಪೊಲೀಸರು ಗುರುತಿಸಿದ್ದರು.

ಸತೀಂದರ್‌ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಪ್ರಸ್ತುತ ಅಮೆರಿಕದಲ್ಲಿದ್ದಾನೆ ಎಂದು ನಂಬಲಾಗಿದೆ. ಬ್ರಾರ್ 2017ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ಹೋಗಿದ್ದನು

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಲ್ಲಿ ಸಕ್ರಿಯ ಸದಸ್ಯನಾಗಿದ್ದ ಬ್ರಾರ್‌, ಕಳೆದ ವರ್ಷ ಅದರಿಂದ ಬೇರ್ಪಟ್ಟು ರೋಹಿತ್ ಗೋದಾರ-ಕಲಾ ಜಥೇರಿ ಗ್ಯಾಂಗ್‌ನ ಭಾಗವಾಗಿದ್ದಾನೆ ಎಂದು ವರದಿ ತಿಳಿಸಿದೆ.

2024ರಲ್ಲಿ, ಭಾರತದಲ್ಲಿ ಹತ್ಯೆ ನಡೆಸಲು ಗಡಿಯಾಚೆಯಿಂದ ಡ್ರೋನ್‌ಗಳ ಮೂಲಕ ಉನ್ನತ ದರ್ಜೆಯ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ಸರ್ಕಾರವು ಬ್ರಾರ್‌ನನ್ನು ಭಯೋತ್ಪಾದಕ ಎಂದು ಹೆಸರಿಸಿತ್ತು.