ADVERTISEMENT

ವೈಜಾಗ್‌ನ Google AI ಹಬ್ ಡಿಜಿಟಲ್ ಆರ್ಥಿಕತೆಗೆ ಪೂರಕ: ಪ್ರಧಾನಿ ಮೋದಿ

ಪಿಟಿಐ
Published 14 ಅಕ್ಟೋಬರ್ 2025, 9:54 IST
Last Updated 14 ಅಕ್ಟೋಬರ್ 2025, 9:54 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ </p></div>

ಪ್ರಧಾನಿ ನರೇಂದ್ರ ಮೋದಿ

   

(ಸಂಗ್ರಹ ಚಿತ್ರ) 

ನವದೆಹಲಿ: ಅಮೆರಿಕದ ಟೆಕ್ ದೈತ್ಯ ಕಂಪನಿ ಗೂಗಲ್ ಆಂಧ್ರ ಪ್ರದೇಶದ ಬಂದರು ನಗರವಾದ ವಿಶಾಖಪಟ್ಟಣದಲ್ಲಿ ಬೃಹತ್ ಡಾಟಾ ಸೆಂಟರ್ ಮತ್ತು ಕೃತಕ ಬುದ್ಧಿಮತ್ತೆಯ ಹಬ್ ಸ್ಥಾಪಿಸುವುದಾಗಿ ಮಂಗಳವಾರ ಘೋಷಿಸಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 15 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿಯೂ ಗೂಗಲ್ ಮಂಗಳವಾರ ತಿಳಿಸಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ವಿಶಾಖಪಟ್ಟಣದಲ್ಲಿ ಗೂಗಲ್ ಎಐ ಹಬ್ ಉದ್ಘಾಟನೆಯು ತಂತ್ರಜ್ಞಾನದ ಅಭಿವೃದ್ಧಿಗೆ ಪ್ರಬಲ ಶಕ್ತಿಯಾಗಲಿದೆ ಎಂದು ಹೇಳಿದ್ದಾರೆ.

ಆಂಧ್ರಪ್ರದೇಶದ ಕ್ರಿಯಾತ್ಮಕ ನಗರವಾದ ವಿಶಾಖಪಟ್ಟಣದಲ್ಲಿ ಗೂಗಲ್ ಎಐ ಹಬ್ ಉದ್ಘಾಟನೆಯಿಂದ ಸಂತೋಷವಾಗಿದೆ ಎಂದು ಮೋದಿ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

1 ಗಿಗಾವ್ಯಾಟ್ ಟಾಟಾ ಸೆಂಟರ್ ಮೂಲಸೌಕರ್ಯವನ್ನು ಒಳಗೊಂಡಿರುವ ಬಹುಮುಖಿ ಹೂಡಿಕೆಯು ವಿಕಸಿತ ಭಾರತವನ್ನು ನಿರ್ಮಿಸುವ ಸರ್ಕಾರದ ದೃಷ್ಟಿಕೋನಕ್ಕೆ ಪೂರಕವಾಗಿದೆ ಎಂದು ಮೋದಿ ತಿಳಿಸಿದ್ದಾರೆ..

ತಂತ್ರಜ್ಞಾನವನ್ನು ಎಲ್ಲೆಡೆ ಪಸರಿಸುವಲ್ಲಿ ಇದು ಪ್ರಬಲ ಶಕ್ತಿಯಾಗಲಿದೆ. ಪ್ರತಿಯೊಬ್ಬರಿಗೂ ಎಐ ಅನ್ನು ಖಚಿತಪಡಿಸುತ್ತದೆ. ನಮ್ಮ ನಾಗರಿಕರಿಗೆ ಅತ್ಯಾಧುನಿಕ ಸಲಕರಣೆ ಅನ್ನು ಒದಗಿಸುತ್ತದೆ. ಡಿಜಿಟಲ್ ಆರ್ಥಿಕತೆಗೆ ಉತ್ತೇಜನ ಮತ್ತು ಜಾಗತಿಕ ತಂತ್ರಜ್ಞಾನ ನಾಯಕನಾಗಿ ಭಾರತದ ಸ್ಥಾನವನ್ನು ಭದ್ರಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು.

ವಿಶಾಖಪಟ್ಟಣದಲ್ಲಿ ಮೊದಲ ಗೂಗಲ್ ಎಐ ಹಬ್‌ಗಾಗಿ ಕಂಪನಿಯ ಯೋಜನೆಗಳನ್ನು ಭಾರತದ ಜೊತೆ ಹಂಚಿಕೊಂಡ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ಅವರ ಪೋಸ್ಟ್‌ಗೆ ಮೋದಿ ಪ್ರತಿಕ್ರಿಯಿಸಿದರು.

ಪ್ರಧಾನಿ ಮೋದಿ ಅವರ ಜೊತೆಗಿನ ಮಾತುಕತೆ ಅದ್ಭುತವಾಗಿತ್ತು. ವಿಶಾಖಪಟ್ಟಣದಲ್ಲಿ ಮೊದಲ ಗೂಗಲ್ ಎಐ ಹಬ್ ಕುರಿತ ನಮ್ಮ ಯೋಜನೆ ಹಂಚಿಕೊಂಡಿದ್ದು ಅಭೂತಪೂರ್ವ ಬೆಳವಣಿಗೆಯಾಗಿದೆ. ಇದು ಗಿಗಾವ್ಯಾಟ್-ಸ್ಕೇಲ್ ಕಂಪ್ಯೂಟ್ ಸಾಮರ್ಥ್ಯ, ಹೊಸ ಅಂತರರಾಷ್ಟ್ರೀಯ ಸಬ್‌ಸೀ ಗೇಟ್‌ವೇ ಮತ್ತು ದೊಡ್ಡ ಪ್ರಮಾಣದ ಇಂಧನ ಮೂಲಸೌಕರ್ಯವನ್ನು ಸಂಯೋಜಿಸುತ್ತದೆ ಎಂದು ಪಿಚೈ ಹೇಳಿದ್ದರು.

ಅದಾನಿ ಗ್ರೂಪ್‌ನ ಸಹಭಾಗಿತ್ವದಲ್ಲಿ ಎಐ ಹಬ್ ಅನ್ನು ಸ್ಥಾಪಿಸಲು ಗೂಗಲ್ ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ 15 ಬಿಲಿಯನ್ ಅಮೆರಿಕ ಡಾಲರ್ ಹೂಡಿಕೆ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.