ADVERTISEMENT

₹27ಕ್ಕೆ ಕೆ.ಜಿ ಗೋಧಿ ಹಿಟ್ಟು: ಕೇಂದ್ರದಿಂದ ‘ಭಾರತ್‌ ಆಟಾ’ ಬ್ರ್ಯಾಂಡ್‌ ಬಿಡುಗಡೆ

ಪಿಟಿಐ
Published 6 ನವೆಂಬರ್ 2023, 15:28 IST
Last Updated 6 ನವೆಂಬರ್ 2023, 15:28 IST
<div class="paragraphs"><p>ಎಕ್ಸ್‌ ಚಿತ್ರ</p></div>

ಎಕ್ಸ್‌ ಚಿತ್ರ

   

ನವದೆಹಲಿ: ಕೇಂದ್ರ ಸರ್ಕಾರವು ಕೆ.ಜಿಗೆ ₹25ರಂತೆ ರಿಯಾಯಿತಿ ದರದ ಗೋಧಿ ಹಿಟ್ಟನ್ನು  ಸೋಮವಾರ ಬಿಡುಗಡೆ ಮಾಡಿದೆ. ‘ಭಾರತ್‌ ಆಟಾ’ ಬ್ರ್ಯಾಂಡ್‌ ಅಡಿಯಲ್ಲಿ ಈ ಹಿಟ್ಟನ್ನು ದೇಶದಾದ್ಯಂತ ಮಾರಾಟ ಮಾಡಲಾಗುವುದು. ಗೋಧಿ ಹಿಟ್ಟಿನ ಬೆಲೆ ಏರಿಕೆ ಬಿಸಿ ಅನುಭವಿಸುತ್ತಿರುವ ಗ್ರಾಹಕರು ಇದರಿಂದ ತುಸು ನಿರಾಳರಾಗಲಿದ್ದಾರೆ ಎಂದು ಸರ್ಕಾರ ಹೇಳಿದೆ.

ನಾಫೆಡ್‌, ಎನ್‌ಸಿಸಿಎಫ್‌ ಮತ್ತು ಕೇಂದ್ರೀಯ ಭಂಡಾರದ ಮೂಲಕ 800 ಮೊಬೈಲ್‌ ವ್ಯಾನ್‌ ಮತ್ತು 2 ಸಾವಿರಕ್ಕೂ ಅಧಿಕ ಮಳಿಗೆಗಳಲ್ಲಿ ಈ ಗೋಧಿ ಹಿಟ್ಟನ್ನು ಮಾರಾಟ ಮಾಡಲಾಗುವುದು ಎಂದು ತಿಳಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಗೋಧಿ ಹಿಟ್ಟಿನ ದರವು ಕೆ.ಜಿಗೆ ₹36–70ರವರೆಗೆ ಇದೆ. ಭಾರತ್‌ ಆಟಾ ದರವನ್ನು ಅದಕ್ಕಿಂತಲೂ ಕಡಿಮೆಗೆ ನಿಗದಿ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. 

ADVERTISEMENT

ಫೆಬ್ರುವರಿಯಲ್ಲಿ ಪರೀಕ್ಷಾರ್ಥವಾಗಿ 18 ಸಾವಿರ ಟನ್‌ನಷ್ಟು ಗೋಧಿ ಹಿಟ್ಟನ್ನು ಕೆ.ಜಿಗೆ ₹29.50ರಂತೆ ಮಾರಾಟ ಮಾಡಲಾಗಿತ್ತು. ದೆಹಲಿಯ ಇಂಡಿಯಾ ಗೇಟ್‌ ಬಳಿಯ ಕರ್ತವ್ಯ ಪಥದಲ್ಲಿ ‘ಭಾರತ್‌ ಬ್ರ್ಯಾಂಡ್‌ನ’ 100 ಮೊಬೈಲ್‌ ವ್ಯಾನ್‌ಗಳಿಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪೀಯೂಷ್ ಗೋಯಲ್‌ ಚಾಲನೆ ನೀಡಿದರು. ಪರೀಕ್ಷಾರ್ಥ ಮಾರಾಟವು ಯಶಸ್ವಿ ಆಗಿದ್ದು, ಇದೀಗ ದೇಶದೆಲ್ಲೆಡೆ ಕೆ.ಜಿಗೆ ₹27.50ರ ದರಕ್ಕೆ ಗೋಧಿ ಹಿಟ್ಟು ಲಭ್ಯ ಎಂದು ಹೇಳಿದ್ದಾರೆ.

ಭಾರತೀಯ ಆಹಾರ ನಿಗಮವು (ಎಫ್‌ಸಿಐ) 2.5 ಲಕ್ಷ ಟನ್‌ ಗೋಧಿಯನ್ನು ಕೆ.ಜಿಗೆ ₹21.50ರಂತೆ ನಾಫೆಡ್‌, ಎನ್‌ಸಿಸಿಎಫ್‌ ಮತ್ತು ಕೇಂದ್ರೀಯ ಭಂಡಾರಕ್ಕೆ ನೀಡಲಿದೆ. ಈ ಸಂಸ್ಥೆಗಳು ಗೋಧಿಯನ್ನು ಹಿಟ್ಟಾಗಿ ‍ಪರಿವರ್ತಿಸಿ ‘ಭಾರತ್‌ ಆಟಾ’ ಬ್ರ್ಯಾಂಡ್‌ ಅಡಿಯಲ್ಲಿ ಕೆ.ಜಿಗೆ ₹27.50ರಂತೆ ಮಾರಾಟ ಮಾಡಲಿವೆ ಎಂದು ಗೋಯಲ್ ಮಾಹಿತಿ ನೀಡಿದ್ದಾರೆ.

ಗೋಧಿ ಹಿಟ್ಟಿನ ಲಭ್ಯತೆ ಹೆಚ್ಚಿಸಲು ಮತ್ತು ಬೆಲೆಯನ್ನು ನಿಯಂತ್ರಿಸಲು ಇದರಿಂದ ಅನುಕೂಲ ಆಗಲಿದೆ. ಕೇಂದ್ರ ಸರ್ಕಾರವು ಕಡಲೆ ಬೇಳೆ, ಟೊಮೊಟೊ ಮತ್ತು ಈರುಳ್ಳಿಯನ್ನು ಸಹ ರಿಯಾಯಿತಿ ದರಕ್ಕೆ ಮಾರಾಟ ಮಾಡುತ್ತಿದ್ದು, ಬೆಲೆಯು ನಿಯಂತ್ರಣಕ್ಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಈ ಮೂರು ಸಂಸ್ಥೆಗಳ ಮೊಬೈಲ್‌ ವ್ಯಾನ್‌ಗಳು ಮತ್ತು ಮಳಿಗೆಗಳು ಕೆ.ಜಿಗೆ ₹27.50ರಂತೆ ಗೋಧಿ ಹಿಟ್ಟು, ಕೆ.ಜಿಗೆ ₹60ರಂತೆ ಕಡಲೆ ಬೇಳೆ ಮತ್ತು ಕೆ.ಜಿಗೆ ₹25ರಂತೆ ಈರುಳ್ಳಿಯನ್ನು ಮಾರಾಟ ಮಾಡುತ್ತಿವೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್‌ ಕುಮಾರ್ ತಿಳಿಸಿದ್ದಾರೆ.

ಮಾರಾಟ ಹೇಗೆ?

* ನಾಫೆಡ್‌, ಎನ್‌ಸಿಸಿಎಫ್‌ ಮತ್ತು ಕೇಂದ್ರೀಯ ಭಂಡಾರ ಏಜೆನ್ಸಿ ಮೂಲಕ

* 800 ಮೊಬೈಲ್‌ ವ್ಯಾನ್‌ಗಳ ಬಳಕೆ

* 2 ಸಾವಿರಕ್ಕೂ ಅಧಿಕ ಮಳಿಗೆಗಳಲ್ಲಿ ‘ಭಾರತ್‌ ಆಟಾ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.