ADVERTISEMENT

ಸಂಸತ್ ಕಲಾಪ ಸ್ಥಗಿತಕ್ಕೆ ಸರ್ಕಾರವೇ ಹೊಣೆ: ವಿರೋಧ ಪಕ್ಷಗಳ ಆರೋಪ

ಅಮಾನತು ರದ್ದಾಗುವ ತನಕ ರಾಜ್ಯಸಭೆಯಲ್ಲಿ ಜಂಟಿ ಹೋರಾಟ: ಖರ್ಗೆ ದೃಢನುಡಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 21:47 IST
Last Updated 7 ಡಿಸೆಂಬರ್ 2021, 21:47 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ (ಪಿಟಿಐ): ರಾಜ್ಯಸಭೆಯ ಕಲಾಪ ಸ್ಥಗಿತಗೊಳ್ಳುತ್ತಿರುವುದಕ್ಕೆ ಸರ್ಕಾರವನ್ನೇ ಹೊಣೆ ಮಾಡಿರುವ ವಿರೋಧ ಪಕ್ಷಗಳ ನಾಯಕರು, 12 ಸಂಸದರ ಅಮಾನತು ಆದೇಶವನ್ನು ಹಿಂಪಡೆಯುವವರೆಗೆ ತಮ್ಮ ಜಂಟಿ ಹೋರಾಟ ಮುಂದುವರಿಯಲಿದೆ ಎಂದು ಮಂಗಳವಾರ ತಿಳಿಸಿದ್ದಾರೆ.

ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರನ್ನು ಅಮಾನತು ಮಾಡಿರುವುದು ಪ್ರಜಾಸತ್ತೆಗೆ ವಿರುದ್ಧ ಹಾಗೂ ನಿಯಮಬಾಹಿರವಾಗಿದೆ ಎಂದು
ದೂರಿದರು.

ಅಮಾನತುಗೊಂಡ ಸಂಸದರನ್ನು ಬೆಂಬಲಿಸಿ ತಮ್ಮ ಧರಣಿ ಮುಂದುವರಿಯಲಿದೆ ಎಂದ ಅವರು, ಈ ವಿಷಯವಾಗಿ ಲೋಕಸಭಾ ಸದಸ್ಯರೂ ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಮುಂಗಾರು ಅಧಿವೇಶನದಲ್ಲಿ
‘ಅಶಿಸ್ತಿನ ನಡವಳಿಕೆ’ ತೋರಿದ ಆರೋಪದಲ್ಲಿ ರಾಜ್ಯಸಭೆಯ 12 ಸದಸ್ಯರನ್ನು ಚಳಿಗಾಲದ ಅಧಿವೇಶನ ಅವಧಿ ಮುಗಿಯುವವರೆಗೆ, ಸಭಾಪತಿ ವೆಂಕಯ್ಯ ನಾಯ್ಡು ಅವರು ಅಮಾನತು ಮಾಡಿದ್ದಾರೆ.

‘ಪ್ರತಿಯೊಬ್ಬ ಸದಸ್ಯರ ಹೆಸರನ್ನೂ ಪ್ರತ್ಯೇಕವಾಗಿ ಕೂಗಿ, ಅವರನ್ನು ಯಾಕಾಗಿ ಅಮಾನತು ಮಾಡಲಾಗುತ್ತಿದೆ ಎಂಬುದನ್ನೂ ಹೇಳಬೇಕು. ಆ ನಂತರವಷ್ಟೇ ಅದು ಅಮಾನತು ಎನಿಸಿಕೊಳ್ಳುತ್ತದೆ. ಅದು ಕೂಡ ಆಗಸ್ಟ್‌ 11ರಂದೇ ಆಗಬೇಕಿತ್ತು’ ಎಂದರು.

‘ಅಧಿವೇಶನವೇ ಮುಕ್ತಾಯವಾದ ಮೇಲೆ, ಹಿಂದಿನ ಅಧಿವೇಶನಕ್ಕೆ ಸಂಬಂಧಪಟ್ಟಂತೆ ಸದಸ್ಯರನ್ನು ಅಮಾನತು ಮಾಡುವ ಅಧಿಕಾರ ಸರ್ಕಾರಕ್ಕಿಲ್ಲ. ಈ ಕ್ರಮವು ಸಂವಿಧಾನಬದ್ಧವಾಗಿಲ್ಲ. ಕಲಾಪ ನಡೆಯುವುದು ಸರ್ಕಾರಕ್ಕೆ ಬೇಕಿಲ್ಲ ಎಂಬುದು ಇದರಿಂದ ವೇದ್ಯವಾಗುತ್ತದೆ’ ಎಂದು ಖರ್ಗೆ
ಹೇಳಿದರು.

‘ನಮ್ಮ ದನಿಯನ್ನು ಹತ್ತಿಕ್ಕಲು ಬಿಡುವುದಿಲ್ಲ. ಸರ್ವಾಧಿಕಾರದಿಂದ ಸಂಸತ್ತಿನ ಅಧಿವೇಶನ ನಡೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಬಯಸುತ್ತಾರೆ. ಅದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ’ ಎಂದರು.

ಕಾಂಗ್ರೆಸ್‌ನ ಆರು ಸಂಸದರು, ತೃಣಮೂಲ ಕಾಂಗ್ರೆಸ್‌ ಹಾಗೂ ಶಿವಸೇನೆಯ ತಲಾ ಇಬ್ಬರು, ಸಿಪಿಐ ಹಾಗೂ ಸಿಪಿಎಂನ ತಲಾ ಒಬ್ಬ ಸಂಸದರು ಚಳಿಗಾಲದ ಅಧಿವೇಶನ ಆರಂಭವಾದ ದಿನದಂದೇ ಅಮಾನತುಗೊಂಡಿದ್ದು, ಅಂದಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.