ADVERTISEMENT

ಕೊನೆಗೂ ಜೋಸೆಫ್‌ಗೆ ಬಡ್ತಿ

ಸಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸಿಗೆ ಕೇಂದ್ರ ಅನುಮೋದನೆ

ಪಿಟಿಐ
Published 3 ಆಗಸ್ಟ್ 2018, 15:45 IST
Last Updated 3 ಆಗಸ್ಟ್ 2018, 15:45 IST
ಕೆ.ಎಂ. ಜೋಸೆಫ್‌
ಕೆ.ಎಂ. ಜೋಸೆಫ್‌   

ನವದೆಹಲಿ: ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವಂತೆ ಕೊಲಿಜಿಯಂ ಮಾಡಿದ್ದ ಶಿಫಾರಸಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಿಂದಾಗಿ, ಅವರ ಬಡ್ತಿಗೆ ಸಂಬಂಧಿಸಿ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ ನಡುವೆ ಉಂಟಾಗಿದ್ದ ದೀರ್ಘ ಕಾಲದ ಬಿಕ್ಕಟ್ಟು ಬಗೆಹರಿದಿದೆ.

ಮದ್ರಾಸ್‌ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ಒರಿಸ್ಸಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿನೀತ್‌ ಶರಣ್‌ ಅವರಿಗೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲಾಗಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಕೊಲಿಜಿಯಂ, ಜೋಸೆಫ್‌ ಅವರ ಹೆಸರನ್ನು ಬಡ್ತಿಗಾಗಿ ಜನವರಿ 10ರಂದೇ ಶಿಫಾರಸು ಮಾಡಿತ್ತು.

ADVERTISEMENT

ಆದರೆ ಅವರ ಹೆಸರನ್ನು ಮರುಪರಿಶೀಲಿಸುವಂತೆ‍ಕೇಂದ್ರ ಸರ್ಕಾರವು ಶಿಫಾರಸನ್ನು ಏಪ್ರಿಲ್‌ 30ರಂದು ವಾಪಸ್ ಕಳುಹಿಸಿತ್ತು. ಅವರಿಗೆ ಸೇವಾ ಜ್ಯೇಷ್ಠತೆ ಇಲ್ಲ ಎಂದು ಕಾರಣ ಕೊಡಲಾಗಿತ್ತು.

ಹಲವು ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾತಿನಿಧ್ಯ ಇಲ್ಲ. ಹಾಗಾಗಿ ಜೋಸೆಫ್‌ ಅವರ ಬಡ್ತಿಯು ಪ್ರಾದೇಶಿಕ ಪ್ರಾತಿನಿಧ್ಯ ತತ್ವಕ್ಕೆ ವಿರುದ್ಧವಾಗಿದೆ ಎಂದೂ ಕೇಂದ್ರ ಸರ್ಕಾರ ಹೇಳಿತ್ತು.

ಜೋಸೆಫ್‌ ಅವರ ಬಡ್ತಿ ಶಿಫಾರಸನ್ನು ಮರು ಪರಿಶೀಲನೆ ಮಾಡದಿರಲು ಮೇ 16ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಉತ್ತರಾಖಂಡದ ಹರೀಶ್‌ ರಾವತ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು 2016ರಲ್ಲಿ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಆದರೆ, ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಪಡಿಸಿ ಜೋಸೆಫ್‌ ತೀರ್ಪು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.