ADVERTISEMENT

ಸಿಬಿಐ ಒಳಜಗಳ: ಅಗತ್ಯ ಸಂದರ್ಭದಲ್ಲಿ ಸರ್ಕಾರ ಮಧ್ಯಪ್ರವೇಶಿಸಲಿಲ್ಲ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 14:12 IST
Last Updated 23 ಅಕ್ಟೋಬರ್ 2018, 14:12 IST
ಪ್ರಕಾಶ್ ಸಿಂಗ್
ಪ್ರಕಾಶ್ ಸಿಂಗ್   

ಸಿಬಿಐನ ಇಬ್ಬರು ಅಧಿಕಾರಿಗಳ ಜಗಳದಲ್ಲಿ ಮದ್ಯಪ್ರವೇಶಿಸಬೇಕಿದ್ದ ಸಮಯದಲ್ಲಿ ಸರ್ಕಾರ ಆ ಕೆಲಸ ಮಾಡಲಿಲ್ಲ. ಇದರಿಂದ ಸಿಬಿಐನ ಘನತೆಗೆ ಧಕ್ಕೆಯಾಗಿದೆ ಎಂಬುದು ನಿವೃತ್ತ ಐಪಿಎಸ್ ಅಧಿಕಾರಿ ಪ್ರಕಾಶ್ ಸಿಂಗ್ ಅವರ ದಿಟ್ಟ ನುಡಿ. ದೇಶದ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಪ್ರಕಾಶ್ ಅವರು, ಸಿಬಿಐನ ಈಗಿನ ಆಂತರಿಕ ಜಗಳದ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

* ಈಚಿನ ಬೆಳವಣಿಗೆಗಳಿಂದ ಸಿಬಿಐನ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆಯೇ?

ಖಂಡಿತವಾಗಿಯೂ ಇದರಿಂದ ಸಿಬಿಐನ ವಿಶ್ವಾಸಾರ್ಹತೆಗೆ ಕುಂದುಬಂದಿದೆ. ಇದು ದೇಶದ ಅತ್ಯುನ್ನತ ತನಿಖಾ ಸಂಸ್ಥೆ. ಸಂಸ್ಥೆಯ ಇಬ್ಬರು ಉನ್ನತಾಧಿಕಾರಿಗಳು ಪರಸ್ಪರ ಕಿತ್ತಾಡುತ್ತಿರುವುದು ದುರಂತವೇ ಸರಿ. ಸಿಬಿಐ ತನ್ನದೇ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಅಧಿಕಾರಿಗಳು ಪರಸ್ಪರರ ಮೇಲೆ ಆರೋಪ–ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದು ಅತ್ಯಂತ ವಿಪರ್ಯಾಸದ ಬೆಳವಣಿಗೆ.

ADVERTISEMENT

* ಈ ಇಬ್ಬರು ಅಧಿಕಾರಿಗಳ ನಡುವಣ ಜಗಳ ಬಹಿರಂಗವಾದ್ದದು ಇದೇ ಮೊದಲಲ್ಲ. ಈ ಜಗಳದಲ್ಲಿ ಮಧ್ಯಪ್ರವೇಶಿಸಲು ಸರ್ಕಾರವು ತಡಮಾಡಿತೇ?

ಸಿಬ್ಬಂದಿ ಸಚಿವಾಲಯದ ಅಧೀನದಲ್ಲಿ ಸಿಬಿಐ ಬರುತ್ತದೆ. ಸಚಿವಾಲಯವು ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಬೇಕಿತ್ತು, ವಿವಾದವನ್ನು ಬಗೆಹರಿಸಬೇಕಿತ್ತು. ಆದರೆ ಆ ಕೆಲಸ ಆಗಿಲ್ಲ.

* ಈ ವಿಚಾರದಲ್ಲಿ ಸರ್ಕಾರಕ್ಕೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ನಿಮ್ಮ ಸಲಹೆಯೇನು?

ಸರ್ಕಾರಕ್ಕೆ ನಾನು ಸಲಹೆ ನೀಡುವುದು ಅತಿಯಾಗುತ್ತದೆ. ಆದರೆ ಪೊಲೀಸ್ ಅಧಿಕಾರಿಗಳು ತಮ್ಮ ನಡುವಣ ನಾಯಿಜಗಳ–ಕೋಳಿಜಗಳವನ್ನು ತಕ್ಷಣವೇ ನಿಲ್ಲಿಸಬೇಕು. ಈ ಜಗಳದಿಂದ ಸಿಬಿಐನ ಘನತೆ ಮಣ್ಣುಪಾಲಾಗುತ್ತಿದೆ. ಯಾವುದೇ ಸ್ವರೂಪದ ಬಾಹ್ಯ ಒತ್ತಡಗಳಿಂದ ಸಿಬಿಐ ನಿರ್ದೇಶಕರನ್ನು ರಕ್ಷಿಸುವ ಉದ್ದೇಶದಿಂದಲೇ ಅವರ ಹುದ್ದೆಯ ಅವಧಿಯನ್ನು ಎರಡು ವರ್ಷಕ್ಕೆ ಮಿತಿಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಆದರೆ ಅದ್ಯಾವುದೂ ಪಾಲನೆಯಾಗುತ್ತಿಲ್ಲ.

ಸಿಬಿಐ ಒಳಜಗಳದ ಹಿನ್ನೋಟ

* ರಾಕೇಶ್ ಅಸ್ತಾನಾ ಅವರನ್ನು ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಿ 2016ರ ಡಿಸೆಂಬರ್‌ನಲ್ಲಿ ಸರ್ಕಾರವು ಆದೇಶ ಹೊರಡಿಸಿತು

* ಅಸ್ತಾನಾ ನೇಮಕದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

* ಸಿಬಿಐ ನಿರ್ದೇಶಕರಾಗಿ ಅಲೋಕ್ ವರ್ಮಾ ಅವರನ್ನು 2017ರ ಜನವರಿ 19ರಂದು ಸರ್ಕಾರ ಆದೇಶ ಹೊರಡಿಸಿತು

* ಅಲೋಕ್ ವರ್ಮಾ ಅವರ ಆಕ್ಷೇಪದ ಮಧ್ಯೆಯೂ ಸಿಬಿಐ ವಿಶೇಷ ನಿರ್ದೇಶಕರಾಗಿ ಅಸ್ತಾನಾ ಅವರಿಗೆ ಬಡ್ತಿ ನೀಡಿದ್ದನ್ನು ಕೇಂದ್ರ ಜಾಗೃತ ಆಯೋಗ (ಸಿವಿಸಿ) ಅನುಮೋದಸಿತು

* ಸಿಬಿಐ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ತಮ್ಮನ್ನು ಪ್ರತಿನಿಧಿಸುವ ಅಧಿಕಾರ ಅಸ್ತಾನಾ ಅವರಿಗಿಲ್ಲ ಎಂದು ವರ್ಮಾ ಅವರು ಸಿವಿಸಿಗೆ ಪತ್ರ ಬರೆದರು

* ಇದೇ ಸೆಪ್ಟೆಂಬರ್‌ನಲ್ಲಿ ಅಸ್ತಾನಾ ಅವರು ವರ್ಮಾ ವಿರುದ್ಧ ಸಿವಿಸಿಗೆ ದೂರು ನೀಡಿದರು

* ಅಕ್ಟೋಬರ್ 15ರಂದು ಅಸ್ತಾನಾ ವಿರುದ್ಧ ಸಿಬಿಐನಲ್ಲೇ ಪ್ರಕರಣ ದಾಖಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.