ADVERTISEMENT

ಪೆಟ್ರೋಲ್‌,ಡೀಸೆಲ್‌ ಮೇಲೆ ತೆರಿಗೆ: 6 ತಿಂಗಳಲ್ಲಿ ₹3.41 ಲಕ್ಷ ಕೋಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 16:20 IST
Last Updated 4 ಡಿಸೆಂಬರ್ 2023, 16:20 IST
....
....   

ನವದೆಹಲಿ: ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆ ಮೂಲಕ ಪ್ರಸಕ್ತ ಆರ್ಥಿಕ ಸಾಲಿನ ಮೊದಲಾರ್ಧದ ಆರು ತಿಂಗಳ ಅವಧಿಯಲ್ಲಿ ₹3.41 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ.

ಇದರಲ್ಲಿ ಕೇಂದ್ರ ಸರ್ಕಾರದ ಖಜಾನೆಗೆ ₹1.85 ಲಕ್ಷ ಕೋಟಿ ಆದಾಯ ಲಭಿಸಿದರೆ, ರಾಜ್ಯಗಳು ₹1.55 ಲಕ್ಷ ಕೋಟಿ ತೆರಿಗೆ ವರಮಾನ ಸಂಗ್ರಹಿಸಿವೆ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಹೇಳಿದೆ.

ಮೇಲ್ಮನೆಯಲ್ಲಿ ಸೋಮವಾರ ರಾಜ್ಯಸಭಾ ಸದಸ್ಯ ಜಾನ್ ಬ್ರಿಟಾಸ್ ಅವರು ಕೇಳಿದ ಪ್ರಶ್ನೆಗೆ  ಕೇಂದ್ರ ಪೆಟ್ರೋಲಿಯಂ ಖಾತೆಯ ರಾಜ್ಯ ಸಚಿವ ರಾಮೇಶ್ವರ ತೇಲಿ ನೀಡಿರುವ ಉತ್ತರದಲ್ಲಿ, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರವು ಪ್ರತಿವರ್ಷ ಸೆಸ್‌ ಹೆಚ್ಚಿಸುತ್ತಿರುವುದು  ಬಹಿರಂಗವಾಗಿದೆ. 

ADVERTISEMENT

ಇತ್ತೀಚಿನ ವರ್ಷಗಳಲ್ಲಿ ಕಚ್ಚಾ ತೈಲದ ಮೇಲೆ ವಿಧಿಸುವ ಸೆಸ್‌ ಗಣನೀಯವಾಗಿ ಏರಿಕೆಯಾಗಿದೆ. 2020–21ರಲ್ಲಿ ₹10,676 ಕೋಟಿ ಇದ್ದ ಸೆಸ್‌ ಮೊತ್ತವು 2022–23ನೇ ಸಾಲಿನಲ್ಲಿ ₹21,455 ಕೋಟಿಗೆ ಹೆಚ್ಚಳವಾಗಿದೆ ಎಂದು ಸಚಿವ ರಾಮೇಶ್ವರ ತೇಲಿ ಅವರು, ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸದಸ್ಯ ಬ್ರಿಟಾಸ್‌, ‘ತೆರಿಗೆ ಮತ್ತು ಸುಂಕ ಸಂಗ್ರಹದಲ್ಲಿ ಕೇಂದ್ರ ಸರ್ಕಾರದ್ದು ಸಿಂಹ‍ಪಾಲಿದೆ. ಆದರೆ, ಕಚ್ಚಾ ತೈಲದ ಮೇಲೆ ವಿಧಿಸುವ ಸೆಸ್‌ನಲ್ಲಿ ರಾಜ್ಯಗಳಿಗೆ ಯಾವುದೇ ಪಾಲು ಇಲ್ಲ. ಹಾಗಾಗಿ, ಕೇಂದ್ರದ ನೀತಿಯು ತೀವ್ರ ಗೊಂದಲಕಾರಿಯಾಗಿದೆ’ ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿವೆ. ಇದರಿಂದ ದಿನೇ ದಿನೇ ಇಂಧನದ ಬೆಲೆ ಗಗನಮುಖಿಯಾಗುತ್ತಿದೆ. ಅದರಲ್ಲೂ ಕೇಂದ್ರವು ನಿರಂತರವಾಗಿ ಅಬಕಾರಿ ತೆರಿಗೆ ಹೆಚ್ಚಿಸುತ್ತಿದೆ. ಮತ್ತೊಂದೆಡೆ ರಾಜ್ಯಗಳು ಸೇವಾ ಮತ್ತು ಮೌಲ್ಯವರ್ಧಿತ ತೆರಿಗೆ ವಿಧಿಸುತ್ತವೆ. ರಾಜ್ಯದಿಂದ ರಾಜ್ಯಕ್ಕೆ ಈ ತೆರಿಗೆಯಲ್ಲಿಯೂ ಅಜಗಜಾಂತರ ವ್ಯತ್ಯಾಸ ಇದೆ. 

ಸರ್ಕಾರಕ್ಕೆ ಬಂದ ಆದಾಯ ಎಷ್ಟು?:

2023ರ ಮಾರ್ಚ್‌ ಅಂತ್ಯದ ಆರ್ಥಿಕ ವರ್ಷದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯ ಮೂಲಕ ₹7.48 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರಕ್ಕೆ ₹4.28 ಲಕ್ಷ ಕೋಟಿ ಲಭಿಸಿದರೆ, ರಾಜ್ಯಗಳ ಬೊಕ್ಕಸಕ್ಕೆ ₹3.20 ಲಕ್ಷ ಕೋಟಿ ಆದಾಯ ಹರಿದುಬಂದಿದೆ.

2021–22ರ ಕೋವಿಡ್‌–19 ಕಾಲಘಟ್ಟದಲ್ಲಿ ₹7.74 ಲಕ್ಷ ಕೋಟಿ ವರಮಾನ ಸಂಗ್ರಹವಾಗಿತ್ತು. ಇದರಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಕ್ರಮವಾಗಿ ₹4.92 ಲಕ್ಷ ಕೋಟಿ ಹಾಗೂ ₹2.82 ಲಕ್ಷ ಕೋಟಿ ಹಂಚಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.