ADVERTISEMENT

ಆಮ್ಲಜನಕ ನಿರ್ವಹಣೆ–ತರಬೇತಿ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಚಾಲನೆ

ಪಿಟಿಐ
Published 22 ಡಿಸೆಂಬರ್ 2021, 15:26 IST
Last Updated 22 ಡಿಸೆಂಬರ್ 2021, 15:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:ಕೋವಿಡ್‌ ಸಾಂಕ್ರಾಮಿಕದ ವೇಳೆಯಲ್ಲಿ ದೇಶ ಭಾರಿ ಆಮ್ಲಜನಕ ಕೊರತೆಯನ್ನು ಎದುರಿಸಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ಆಮ್ಲಜನಕದ ವ್ಯರ್ಥವನ್ನು ತಪ್ಪಿಸಲು ಹಾಗೂತರ್ಕಬದ್ಧ ಬಳಕೆಯನ್ನು ಖಾತ್ರಿಪಡಿಸಲುಆರೋಗ್ಯ ಕಾರ್ಯಕತರಿಗೆ ವೈದ್ಯಕೀಯ ಆಮ್ಲಜನಕದ ಸಮರ್ಥ ನಿರ್ವಹಣೆ ಬಗ್ಗೆ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬುಧವಾರ ಚಾಲನೆ ನೀಡಿದೆ.

ಇಲ್ಲಿನ ‘ಏಮ್ಸ್‌’ನಲ್ಲಿ ನಡೆದ ರಾಷ್ಟ್ರೀಯ ಆಮ್ಲಜನಕ ಉಸ್ತುವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರದ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್‌ ಪವಾರ್‌ ಅವರು,‘ಕೋವಿಡ್‌–19 ಸಾಂಕ್ರಾಮಿಕದ ವೇಳೆಯಲ್ಲಿ ದೇಶದಲ್ಲಿ ವೈದ್ಯಕೀಯ ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಿತ್ತು. ಆಮ್ಲಜನಕವು ಕೇವಲ ಕೋವಿಡ್‌–19 ಸೋಂಕು ಮಾತ್ರವಲ್ಲದೇ ಇತರೆ ರೋಗಗಳ ಚಿಕಿತ್ಸೆಗೂ ಅತಿ ಅವಶ್ಯಕವಾಗಿದೆ. ಹಾಗಾಗಿ ಈ ಸಮಯದಲ್ಲಿ ಅದರ ತರ್ಕಬದ್ಧ ಬಳಕೆ ಕಡ್ಡಾಯ ಮತ್ತು ಅನಿವಾರ್ಯವಾಗಿದೆ’ ಎಂದರು.

‘ಆಮ್ಲಜನಕದ ವ್ಯರ್ಥವನ್ನು ತಪ್ಪಿಸುವ ನಿಟ್ಟಿನಲ್ಲಿ ಆಮ್ಲಜನಕ ನಿರ್ವಹಣೆ ಮತ್ತು ಆಡಳಿತದಲ್ಲಿ ತೊಡಗಿರುವ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯ ಜ್ಞಾನ ಮತ್ತು ಕೌಶಲಗಳನ್ನು ನೀಡುವ ಮೂಲಕ ಅವರನ್ನು ಇನ್ನಷ್ಟು ಸದೃಢಗೊಳಿಸುವುದೇ ಈ ಕಾರ್ಯಕ್ರಮದ ಉದ್ದೇಶ’ ಎಂದು ಆರೋಗ್ಯ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ‌

ADVERTISEMENT

‘ದೇಶದಲ್ಲಿ 1,500 ಕ್ಕೂ ಹೆಚ್ಚುಪಿಎಸ್‌ಎ (ಪ್ರೆಶರ್‌ ಸ್ವಿಂಗ್‌ ಅಡ್ಸಾರ್ಪಶನ್‌) ಆಮ್ಲಜನಕ ತಯಾರಿಕಾ ಘಟಕಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿಪಿಎಂ ಕೇರ್ಸ್‌ ನಿಧಿಯನ್ನು ಬಳಸಿ 1,255 ಘಟಕಗಳು ಸೇರಿದಂತೆ ಒಟ್ಟು 1,463 ಘಟಕಗಳನ್ನು ದೇಶದ ವಿವಿಧ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.