ADVERTISEMENT

ಪಿಎಂ–ಕಿಸಾನ್‌: 20.48 ಲಕ್ಷ ಅನರ್ಹ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ಸಂದಾಯ

₹ 1,364 ಕೋಟಿ ಪಾವತಿ: ಆರ್‌ಟಿಐ ಅರ್ಜಿಗೆ ದೊರೆತ ಉತ್ತರದಿಂದ ಬಹಿರಂಗ

ಪಿಟಿಐ
Published 10 ಜನವರಿ 2021, 9:05 IST
Last Updated 10 ಜನವರಿ 2021, 9:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: 20.48 ಲಕ್ಷ ಅನರ್ಹ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ (ಪಿಎಂ–ಕಿಸಾನ್‌) ಒಟ್ಟು ₹ 1,364 ಕೋಟಿ ಪಾವತಿಸಲಾಗಿದೆ. ಆರ್‌ಟಿಐ ಅಡಿ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಕೃಷಿ ಸಚಿವಾಲಯ ನೀಡಿರುವ ಉತ್ತರದಲ್ಲಿ ಈ ಅಂಶ ಬಹಿರಂಗಗೊಂಡಿದೆ.

ಕೇಂದ್ರದ ಮಹತ್ವಾಕಾಂಕ್ಷೆಯ ಈ ಯೋಜನೆಗೆ 2019ರಲ್ಲಿ ಚಾಲನೆ ನೀಡಲಾಗಿದೆ. ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಿಗೆ ಒಟ್ಟು ಮೂರು ಕಂತುಗಳಲ್ಲಿ ವರ್ಷಕ್ಕೆ ₹ 6,000 ಪ್ರೋತ್ಸಾಹಧನ ನೀಡುವ ಯೋಜನೆ ಇದಾಗಿದೆ.

ಕಾಮನ್‌ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನಿಷಿಯೇಟಿವ್‌ (ಸಿಎಚ್‌ಆರ್‌ಐ)ನ ವೆಂಕಟೇಶ ನಾಯಕ್‌ ಎಂಬುವವರು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು.

ADVERTISEMENT

ಈ ಅರ್ಜಿಗೆ ಉತ್ತರಿಸಿರುವ ಕೃಷಿ ಸಚಿವಾಲಯ, ‘ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಈ ಫಲಾನುಭವಿಗಳನ್ನು ಅನರ್ಹ ರೈತರು ಹಾಗೂ ಆದಾಯ ತೆರಿಗೆ ಪಾವತಿಸುವ ರೈತರು ಎಂಬುದಾಗಿ ವಿಂಗಡಿಸಲಾಗಿದೆ’ ಎಂದು ತಿಳಿಸಿದೆ.

‘ಅನರ್ಹ ಫಲಾನುಭವಿಗಳ ಪೈಕಿ ಶೇ 55.58ರಷ್ಟು ರೈತರು ಆದಾಯ ತೆರಿಗೆ ಪಾವತಿಸುವವರಾಗಿದ್ದು, ಉಳಿದವರು (ಶೇ 44.41) ಅನರ್ಹ ರೈತರು ಎಂಬ ವರ್ಗಕ್ಕೆ ಸೇರಿದವರಾಗಿದ್ದಾರೆ’ ಎಂದು ಕೃಷಿ ಸಚಿವಾಲಯ ತಿಳಿಸಿದೆ.

‘ಅನರ್ಹ ಫಲಾನುಭವಿಗಳ ಪೈಕಿ ಗರಿಷ್ಠ ಸಂಖ್ಯೆಯ ರೈತರು ಪಂಜಾಬ್‌, ಅಸ್ಸಾಂ, ಮಹಾರಾಷ್ಟ್ರ, ಗುಜರಾತ್‌ ಹಾಗೂ ಉತ್ತರಪ್ರದೇಶ ರಾಜ್ಯಗಳಿಗೆ ಸೇರಿದವರಾಗಿದ್ದಾರೆ ಎಂಬುದು ಸಚಿವಾಲಯ ಒದಗಿಸಿದ ಮಾಹಿತಿಯಿಂದ ತಿಳಿಯುತ್ತದೆ. ಅನರ್ಹ ಫಲಾನುಭವಿಗಳಿಗೆ ಪಾವತಿಯಾದ ಮೊತ್ತವನ್ನು ವಸೂಲಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂಬುದು ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ’ ಎಂದು ಅರ್ಜಿದಾರ ನಾಯಕ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.