ADVERTISEMENT

‘ಗೋರಕ್ಷಣೆ’ ಹಲ್ಲೆ ತಡೆ ರಾಜ್ಯಗಳ ಹೊಣೆ: ‘ಸುಪ್ರೀಂ’

ಪಿಟಿಐ
Published 3 ಜುಲೈ 2018, 20:13 IST
Last Updated 3 ಜುಲೈ 2018, 20:13 IST

ನವದೆಹಲಿ: ಗೋ ರಕ್ಷಣೆಯ ಹೆಸರಿನಲ್ಲಿ ಗುಂಪುಗಳು ನಡೆಸುವ ಹಿಂಸಾಚಾರವು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಅಷ್ಟೇ ಅಲ್ಲ, ಅದು ಅಪರಾಧ. ಇಂತಹ ಅಪರಾಧಗಳು ನಡೆಯದಂತೆ ತಡೆಯುವುದು ರಾಜ್ಯ ಸರ್ಕಾರಗಳ ಹೊಣೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ದೇಶದಲ್ಲಿ ಇಂತಹ ಕೃತ್ಯಗಳನ್ನು ತಡೆಯುವುದಕ್ಕೆ ಮಾರ್ಗದರ್ಶಿಸೂತ್ರಗಳನ್ನು ರೂಪಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಮೇಲಿನ ತೀರ್ಪನ್ನು ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಕಾಯ್ದಿರಿಸಿದೆ.

ಗುಂಪುಗಳು ನಡೆಸುವ ಹಲ್ಲೆಗಳು ಗಂಭೀರ ವಿಚಾರ ಎಂದಿರುವ ಪೀಠವು, ಇಂತಹದ್ದೇ ಉದ್ದೇಶಕ್ಕಾಗಿ ಹಿಂಸೆ ನಡೆಯುತ್ತಿದೆ ಎಂದು ಸೀಮಿತ ಅರ್ಥದಲ್ಲಿ ಅದನ್ನು ನೋಡಲಾಗದು ಎಂದಿದೆ.

ADVERTISEMENT

ಜಿಲ್ಲೆಗಳಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದ್ದರೂ ಗೋರಕ್ಷಕರಿಂದ ಹಲ್ಲೆ ಪ್ರಕರಣಗಳು ನಿಂತಿಲ್ಲ ಎಂದುಮಹಾತ್ಮ ಗಾಂಧಿ ಅವರ ಮೊಮ್ಮಗ ತುಷಾರ್‌ ಗಾಂಧಿ ಅವರ ಪರವಾಗಿ ವಾದಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಹೇಳಿದರು.

ಜಾರಿಗೆ ಬಾರದ ನಿರ್ದೇಶನ:ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಿಂಸಾಚಾರದ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಳೆದ ಸೆಪ್ಟೆಂಬರ್ 6ರಂದು ಸುಪ್ರೀಂ ಕೋರ್ಟ್‌ ಪೀಠವು ಸೂಚನೆಗಳನ್ನು ನೀಡಿತ್ತು. ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರನ್ನು ನೋಡಲ್‌ ಅಧಿಕಾರಿಯನ್ನಾಗಿ ಒಂದು ವಾರದೊಳಗೆ ನೇಮಿಸಬೇಕು. ಗುಂಪು ಹಿಂಸೆ ತಡೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.