ADVERTISEMENT

ಗಡಿ ಭದ್ರತೆ ₹30 ಕೋಟಿ ಅನುದಾನ ಮಂಜೂರು: ಬಿಎಸ್‌ಎಫ್‌

ಪಿಟಿಐ
Published 30 ನವೆಂಬರ್ 2022, 15:57 IST
Last Updated 30 ನವೆಂಬರ್ 2022, 15:57 IST
ಬಿಎಸ್‌ಎಫ್‌ನ ಸಂಸ್ಥಾಪನಾ ದಿನದ ಮುನ್ನಾ ದಿನವಾದ ಬುಧವಾರ ಬಿಎಸ್‌ಎಫ್‌ನ ಮಹಾನಿರ್ದೇಶಕ ಪಂಕಜ್‌ ಕುಮಾರ್‌ ಸಿಂಗ್‌ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿದರು  –ಪಿಟಿಐ ಚಿತ್ರ
ಬಿಎಸ್‌ಎಫ್‌ನ ಸಂಸ್ಥಾಪನಾ ದಿನದ ಮುನ್ನಾ ದಿನವಾದ ಬುಧವಾರ ಬಿಎಸ್‌ಎಫ್‌ನ ಮಹಾನಿರ್ದೇಶಕ ಪಂಕಜ್‌ ಕುಮಾರ್‌ ಸಿಂಗ್‌ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿದರು  –ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಭಾರತ ಗಡಿಗಳಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು, ಹೆಚ್ಚಿನ ನಿಗಾ ವಹಿಸಲು ಸಿಸಿಟಿವಿ ಕ್ಯಾಮೆರಾ, ಡ್ರೋನ್ ಹಾಗೂ ಇನ್ನಿತರ ಕಣ್ಗಾವಲು ಸಲಕರಣೆಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಗಡಿ ಭದ್ರತಾ ಪಡೆಗೆ (ಬಿಎಸ್‌ಎಫ್‌) ₹30 ಕೋಟಿಯಷ್ಟು ಅನುದಾನ ನೀಡಿದೆ ಎಂದು ಬಿಎಸ್‌ಎಫ್‌ನ ಮಹಾನಿರ್ದೇಶಕ ಪಂಕಜ್‌ ಕುಮಾರ್‌ ಸಿಂಗ್‌ ತಿಳಿಸಿದರು.

ಗಡಿ ಭದ್ರತಾ ಪಡೆಯ 58ನೇ ಸಂಸ್ಥಾಪನಾ ದಿನದ ಮುನ್ನಾ ದಿನವಾದ ಬುಧವಾರ ಸುದ್ದಿಗೋಷ್ಠಿ ನಡೆಸಿದ ಪಂಕಜ್‌ ಕುಮಾರ್‌ ಸಿಂಗ್‌ ಅವರು ಭಾರತದ ಪಾಕಿಸ್ತಾನ–ಬಾಂಗ್ಲಾದೇಶ ಗಡಿಗಳಲ್ಲಿ ಬಿಎಸ್‌ಎಫ್ ಎದುರಿಸುತ್ತಿರುವ ಸವಾಲುಗಳ ಕುರಿತು, ಕಣ್ಗಾವಲು ತಂತ್ರಜ್ಞಾನದ ಕೊರತೆ ಹಾಗೂ ಬಿಎಸ್‌ಎಫ್‌ನ ಕಾರ್ಯಚಟುವಟಿಗಳ ಕುರಿತು ಮಾತನಾಡಿದರು.

‘ಪಾಕಿಸ್ತಾನ ಗಡಿಯಲ್ಲಿ ಡ್ರೋನ್‌ನ ಅಕ್ರಮ ಚಟುವಟಿಕೆ ಹೆಚ್ಚಾಗಿದೆ. ನಮಗೆ ಇದೊಂದು ಪ್ರಮುಖ ಸವಾಲಾಗಿದೆ. ಇದನ್ನು ಸಮರ್ಥವಾಗಿ ಎದುರಿಸುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಆದರೂ, ಮುಂದಿನ ದಿನಗಳಲ್ಲಿ ನಾವು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೇವೆ. ಸದ್ಯ ಇಂಥ ಡ್ರೋನ್‌ಗಳನ್ನು ಪತ್ತೆ ಮಾಡುವ ಮತ್ತು ನಿಷ್ಕ್ರಿಯಗೊಳಿಸುವ ಕೆಲಸವನ್ನು ಮಾಡುತ್ತಿದ್ದೇವೆ’ ಎಂದರು.

ADVERTISEMENT

‘ಗಡಿ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಕಣ್ಗಾವಲು ನಡೆಸಲು ನಾವೇ ‘ಕಡಿಮೆ ಖರ್ಚಿನ ತಂತ್ರಜ್ಞಾನ’ವನ್ನು ಬಳಕೆ ಮಾಡುತ್ತಿದ್ದೇವೆ. ಇದೇ ತಂತ್ರಜ್ಞಾನವನ್ನು ವಿದೇಶದಿಂದ ಖರೀದಿ ಮಾಡಬೇಕು ಅಂತಾದರೆ ಹೆಚ್ಚಗೆ ಹಣ ನೀಡಬೇಕಾಗುತ್ತದೆ. ಆದ್ದರಿಂದ ನಾವೇ ಕಡಿಮೆ ಖರ್ಚಿನ ಸೆನ್ಸಾರ್‌ ಹಾಗೂ ಕಣ್ಗಾವಲು ಸಾಧನಗಳನ್ನು ಅಭಿವೃದ್ಧಿ ಪಡಿಸಿಕೊಂಡಿದ್ದೇವೆ’ ಎಂದರು.

‘ಈ ವರ್ಷ ಪಾಕಿಸ್ತಾನದಿಂದ ಬಂದ 16 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ. ಕಳೆದ ವರ್ಷ ಒಂದು ಡ್ರೋನ್‌ ಅನ್ನು ಹೊಡೆದಿದ್ದೆವು. ಈ ವರ್ಷ ವಶಪಡಿಸಿಕೊಂಡಿರುವ ಪಾಕಿಸ್ತಾನದ ಡ್ರೋನ್‌ಗಳ ವಿಧಿ ವಿಜ್ಞಾನ ಅಧ್ಯಯನಯನ್ನು ನಡೆಸುತ್ತಿದ್ದೇವೆ. ಇದರಿಂದ ಅಂತ್ಯಂತ ಪ್ರಮುಖವಾದ ಮಾಹಿತಿಗಳು ದೊರಕುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.