ADVERTISEMENT

ಕೇಂದ್ರ ಸರ್ಕಾರ ಪಡೆಯಲಿದೆ ಆರ್‌ಬಿಐನ ಮಧ್ಯಂತರ ಲಾಭಾಂಶ: ಸುಭಾಷ್‌ ಚಂದ್ರ ಗಾರ್ಗ್

ಏಜೆನ್ಸೀಸ್
Published 20 ಡಿಸೆಂಬರ್ 2018, 2:36 IST
Last Updated 20 ಡಿಸೆಂಬರ್ 2018, 2:36 IST
   

ನವದೆಹಲಿ:’ಭಾರತೀಯ ರಿಸರ್ವ್ ಬ್ಯಾಂಕ್‌ನ(ಆರ್‌ಬಿಐ) ಮಧ್ಯಂತರ ಲಾಭಾಂಶವನ್ನು ಕೇಂದ್ರ ಸರ್ಕಾರ ಪಡೆಯಲಿದೆ‘ ಎಂದುಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಹೇಳಿದ್ದಾರೆ.

ಕಳೆದ ಆರ್ಥಿಕ ವರ್ಷದಲ್ಲಿ (ಜುಲೈ–ಜೂನ್‌) ಆರ್‌ಬಿಐ ₹10,000 ಕೋಟಿ ಮಧ್ಯಂತರ ಲಾಭಾಂಶವನ್ನು ನೀಡಿತ್ತು. ಈ ಬಾರಿಯೂ ಅದನ್ನು ಪಡೆಯಲಿದೆ ಎಂದು ಗಾರ್ಗ್‌ ಸ್ಪಷ್ಟಪಡಿಸಿದ್ದಾರೆ.

’ಕೇಂದ್ರೀಯ ಬ್ಯಾಂಕ್‌ನ ಮೀಸಲು ನಿಧಿಯ ಪ್ರಮಾಣವನ್ನು ಹೊಸದಾಗಿ ನಿಗದಿಪಡಿಸಿ ಹೆಚ್ಚುವರಿ ಹಣವನ್ನು ಸರ್ಕಾರಕ್ಕೆ ವರ್ಗಾಯಿಸುವ ಕುರಿತು ಹೊಸ ನಿಯಮಾವಳಿ ರೂಪಿಸಲು ಪರಿಣತರ ಸಮಿತಿ ರಚಿಸಲು ನಿರ್ಧರಿಸಲಾಗಿದ್ದ ವಿಷಯ ಬಹುತೇಕ ಅಂತಿಮ ಹಂತದಲ್ಲಿದೆ. ಶೀಘ್ರ ಸಮತಿಯ ಘೋಷಣೆಯಾಗಲಿದೆ‘ ಎಂದಿದ್ದಾರೆ.

ADVERTISEMENT

ನವೆಂಬರ್‌ 19ರಂದು ಹತ್ತು ಗಂಟೆಗಳ ಕಾಲ ಸುದೀರ್ಘವಾಗಿ ನಡೆದಿದ್ದ ಕೇಂದ್ರೀಯ ಮಂಡಳಿ ಸಭೆಯಲ್ಲಿ ಹೊಸ ನಿಯಮಾವಳಿಗಳನ್ನು ರೂಪಿಸಲು ಪರಿಣತರ ಸಮಿತಿ ರಚಿಸಲು ನಿರ್ಧರಿಸಲಾಗಿತ್ತು. ಆದರೆ, 6 ಮಂದಿ ಸದಸ್ಯರ ಸಮಿತಿಯ ಅಧ್ಯಕ್ಷರು ಯಾರಾಗಬೇಕು ಎನ್ನುವುದರ ಬಗ್ಗೆ ಆರ್‌ಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ಒಮ್ಮತಾಭಿಪ್ರಾಯ ಇಲ್ಲದಿರುವ ಕಾರಣ ಸಮಿತಿ ರಚನೆ ಸಾಧ್ಯವಾಗಿಲ್ಲ.

ಆರ್‌ಬಿಐ ಮೀಸಲು ನಿಧಿಯಲ್ಲಿ ಈ ವರ್ಷದ ಜೂನ್‌ ತಿಂಗಳ ಹೊತ್ತಿಗೆ ಇದ್ದ ₹ 9.43 ಲಕ್ಷ ಕೋಟಿಯಲ್ಲಿನ ಹೆಚ್ಚುವರಿ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ವರ್ಗಾಯಿಸಬೇಕು ಎನ್ನುವ ಬೇಡಿಕೆಯು ಭಾರಿ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.

’ವಿತ್ತೀಯ ಶಿಸ್ತು ಕಾಯ್ದುಕೊಳ್ಳಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಥವಾ ಇನ್ಯಾವುದೇ ಸಂಸ್ಥೆಯಿಂದ ಹೆಚ್ಚುವರಿ ನಿಧಿಯ ಅಗತ್ಯ ಸರ್ಕಾರಕ್ಕೆ ಇಲ್ಲ‘ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಪ್ರತಿಕ್ರಿಯಿಸಿದ್ದರು.

ಅಲ್ಲದೆ, ಗಾರ್ಗ್‌ ಅವರೂ ಈ ಮೊದಲು ’ಆರ್‌ಬಿಐನ ಹೆಚ್ಚುವರಿ ನಿಧಿಯನ್ನು ಪಡೆಯುವ ಬಗ್ಗೆ ಯಾವುದೇ ಪ್ರಸ್ತಾವ ಇಲ್ಲ. ಆರ್‌ಬಿಐಗೆ ಹೊಸ ನಿಯಮಾವಳಿಗಳನ್ನು ರೂಪಿಸುವ ಬಗ್ಗೆ ಅಷ್ಟೇ ಚರ್ಚೆ ನಡೆಯುತ್ತಿದೆ‘ ಎಂದು ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.