ADVERTISEMENT

1 ಲಕ್ಷ ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳ ಸಂಗ್ರಹ

ಪಿಎಂ ಕೇರ್ಸ್‌ ಫಂಡ್‌ನಿಂದ 500 ಆಮ್ಲಜನಕ ಸ್ಥಾವರ ಸ್ಥಾಪನೆ: ಮೋದಿ

ಪಿಟಿಐ
Published 28 ಏಪ್ರಿಲ್ 2021, 21:06 IST
Last Updated 28 ಏಪ್ರಿಲ್ 2021, 21:06 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಪಿ.ಎಂ ಕೇರ್ಸ್‌ ಫಂಡ್‌ನಿಂದ ಕೇಂದ್ರ ಸರ್ಕಾರವು ಒಂದು ಲಕ್ಷ ಪೋರ್ಟಬಲ್ ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ಸಂಗ್ರಹಿಸಲಿದ್ದು, ಇನ್ನೂ ಹೆಚ್ಚುವರಿಯಾಗಿ 500 ಫ್ರೆಶರ್ ಸ್ವಿಂಗ್ ಅಡ್‌ಸ್ಪಾರ್ಷನ್ (ಪಿಎಸ್‌ಎ) ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕೋವಿಡ್–19 ನಿರ್ವಹಣೆಗಾಗಿ ದ್ರವ ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ಸುಧಾರಿಸಲು ಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ.

‘ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳ ಸಂಗ್ರಹ ಮತ್ತು ಆಮ್ಲಜನಕ ಸ್ಥಾವರಗಳ ಸ್ಥಾಪನೆಯು ಜಿಲ್ಲಾ ಕೇಂದ್ರಗಳು ಮತ್ತು ಎರಡನೇ ಶ್ರೇಣಿ ನಗರಗಳಲ್ಲಿ (2 ಟಯರ್ ಸಿಟಿ) ಆಮ್ಲಜನಕದ ಕೊರತೆಯ ಸ್ಥಿತಿಯನ್ನು ಸುಧಾರಿಸಲಿದೆ. ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ಶೀಘ್ರವಾಗಿ ಖರೀದಿಸಬೇಕು ಮತ್ತು ಹೆಚ್ಚಿನ ಅಗತ್ಯ ಇರುವ ರಾಜ್ಯಗಳಿಗೆ ಇವುಗಳನ್ನು ಒದಗಿಸಬೇಕು ಎಂದು ಮೋದಿ ನಿರ್ದೇಶಿ ಸಿದ್ದಾರೆ’ ಎಂದೂ ಪ್ರಕಟಣೆ ತಿಳಿಸಿದೆ.

ADVERTISEMENT

ಡಿಆರ್‌ಡಿಒ ಮತ್ತು ಸಿಎಸ್‌ಐಆರ್ ಅಭಿವೃದ್ಧಿಪಡಿಸಿದ ಸ್ಥಳೀಯ ತಂತ್ರಜ್ಞಾನವನ್ನು ದೇಶೀಯ ತಯಾರಕರಿಗೆ ವರ್ಗಾಯಿಸುವುದರೊಂದಿಗೆ 500 ಹೊಸ ಪಿಎಸ್‌ಎ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುತ್ತದೆ.

500 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ
ಶ್ರೀನಗರ:
ಜಮ್ಮು, ಕಾಶ್ಮೀರದಲ್ಲಿ 500 ಹಾಸಿಗೆಗಳ ಎರಡು ಕೋವಿಡ್‌ ಆಸ್ಪತ್ರೆಗಳನ್ನು ಸ್ಥಾಪಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಂದಾಗಿದೆ.

ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.