ADVERTISEMENT

ಆರ್‌ಬಿಐನ ಮೀಸಲು ನಿಧಿ ಕಬಳಿಸಲು ಹುನ್ನಾರ: ಪಿ. ಚಿದಂಬರಂ

ಪಿಟಿಐ
Published 18 ನವೆಂಬರ್ 2018, 13:41 IST
Last Updated 18 ನವೆಂಬರ್ 2018, 13:41 IST
   

ನವದೆಹಲಿ: ‘ಭಾರತೀಯ ರಿಸರ್ವ್‌ ಬ್ಯಾಂಕ್‌ನ ₹9 ಲಕ್ಷ ಕೋಟಿ ಮೀಸಲು ನಿಧಿಯ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರ ಹವಣಿಸುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಭಾನುವಾರ ಆರೋಪಿಸಿದ್ದಾರೆ.

ಸೋಮವಾರ ಆರ್‌ಬಿಐ ಮಂಡಳಿಯ ಸಭೆ ನಡೆಯಲಿದ್ದು, ಇಲ್ಲಿ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಮಧ್ಯೆ ಜಟಾಪಟಿ ನಡೆಯಲಿದೆ ಎಂದಿದ್ದಾರೆ.

‘ಜಗತ್ತಿನಲ್ಲಿ ಎಲ್ಲಿಯೂ ಕೇಂದ್ರೀಯ ಬ್ಯಾಂಕು, ಮಂಡಳಿ ನಿಯಂತ್ರಿತ ಕಂಪನಿಯಾಗಿಲ್ಲ. ಖಾಸಗಿ ಉದ್ಯಮಿಗಳು ಬ್ಯಾಂಕ್‌ನ ಮುಖ್ಯಸ್ಥರಿಗೆ ಸಲಹೆ ನೀಡುವುದು ಹಾಸ್ಯಾಸ್ಪದ’ ಎಂದು ಚಿದಂಬರಂ ಹೇಳಿದ್ದಾರೆ.

ADVERTISEMENT

‘ನವೆಂಬರ್ 19ನೇ ತಾರೀಕು ಕೇಂದ್ರೀಯ ಬ್ಯಾಂಕ್‌ನ ಸ್ವಾತಂತ್ರ್ಯ ಹಾಗೂ ಭಾರತದ ಆರ್ಥಿಕತೆಯನ್ನು ನಿರ್ಧರಿಸುವ ದಿನವಾಗಲಿದೆ’ ಎಂದಿದ್ದಾರೆ.

ಕೇಂದ್ರೀಯ ಬ್ಯಾಂಕ್ ಎಷ್ಟು ಪ್ರಮಾಣದ ಮೀಸಲು ನಿಧಿ ಹೊಂದಿರಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ ಎಂದು ಕೇಂದ್ರ ಸರ್ಕಾರ ನವೆಂಬರ್ 9ರಂದು ತಿಳಿಸಿತ್ತು. ಆದರೆ ಆರ್‌ಬಿಐನ ಬಂಡವಾಳ ನಿಧಿಯನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುವ ಅಂಶವನ್ನು ಅಲ್ಲಗಳೆದಿತ್ತು.

₹3.6 ಲಕ್ಷ ಕೋಟಿಯನ್ನು ವರ್ಗಾಯಿಸಿ ಎಂದು ಕೇಳುವ ಯಾವುದೇ ಉದ್ಧೇಶ ಇಲ್ಲ ಎಂದು ಆರ್ಥಿಕ ವ್ಯವಹಾರ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅವರು ಸ್ಪಷ್ಟಪಡಿಸಿದ್ದರು.

2013–14ನೇ ಆರ್ಥಿಕ ವರ್ಷದ ವಿತ್ತೀಯ ಕೊರತೆ ಶೇ 5.1 ಇತ್ತು. 2014–15ರಿಂದ ಇದು ನಿಯಮಿತವಾಗಿ ತಗ್ಗುತ್ತಿದೆ. 2018–19ರ ವೇಳೆಗೆ ಈ ಪ್ರಮಾಣವನ್ನು ಶೇ 3.3ಕ್ಕೆ ಇಳಿಸುವ ಗುರಿ ಇದೆ ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.