ನವದೆಹಲಿ: ‘ನಮ್ಮ ಸರ್ಕಾರ ಬಡವರ ಏಳಿಗೆಗಾಗಿ ಶ್ರಮಿಸಿದೆ. ದೇಶದ ಮಧ್ಯಮ ಹಾಗೂ ‘ನವ ಮದ್ಯಮ ವರ್ಗ’ದ ಪರ ನಮ್ಮ ಸರ್ಕಾರ ನಿಲ್ಲುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ‘25 ಕೋಟಿ ಜನರನ್ನು ಬಡತನದಿಂದ ಹೊರಗೆ ತರಲಾಗಿದೆ. ಮಧ್ಯಮ ಮತ್ತು ನವ ಮಧ್ಯಮ ವರ್ಗದ ಏಳಿಗೆಗೆ ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ತತ್ವದಡಿ ಕೆಲಸ ಮಾಡುತ್ತದೆ. ಕಾಂಗ್ರೆಸ್ ಪಕ್ಷ ಮತಗಳಿಗಾಗಿ ಓಲೈಕೆ ರಾಜಕಾರಣ ಅನುಸರಿಸುತ್ತಿದೆ. ‘ಕುಟುಂಬವೇ ಮೊದಲು’ ಎಂಬುದು ಕಾಂಗ್ರೆಸ್‌ನ ಆದ್ಯತೆಯಾಗಿದ್ದು, ಇದೇ ವಿಚಾರ ಕೇಂದ್ರೀಕರಿಸಿ ಅದು ತನ್ನ ನೀತಿಗಳನ್ನು ರೂಪಿಸುತ್ತಾ ಬಂದಿದೆ‘ ಎಂದು ಟೀಕಿಸಿದರು.
‘ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ವಿರೋಧಿಸುತ್ತಿತ್ತು’ ಎಂದ ಅವರು, 1975–77ರ ನಡುವೆ ದೇಶದ ಮೇಲೆ ಹೇರಲಾಗಿದ್ದ ತುರ್ತು ಪರಿಸ್ಥಿತಿ ಉಲ್ಲೇಖಿಸಿ, ‘ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿತ್ತು’ ಎಂದು ಟೀಕಿಸಿದರು.
ಈ ವೇಳೆ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಯಿತು. ಆಗ, ‘ನಾನು ತುರ್ತು ಪರಿಸ್ಥಿತಿ ದಿನಗಳನ್ನು ಎಂದಿಗೂ ಮರೆಯುವುದಿಲ್ಲ. ಸಂವಿಧಾನ ಎಂಬ ಪದ ಕಾಂಗ್ರೆಸ್‌ಗೆ ಸೇರುವುದಿಲ್ಲ‘ ಎಂದು ಮೋದಿ ಚಾಟಿ ಬೀಸಿದರು.
ಮೋದಿ ಮಾತು: ಪ್ರಮುಖಾಂಶಗಳು
ಕಳೆದ 5–6 ದಶಕ ದೇಶದ ಜನರಿಗೆ ಪರ್ಯಾಯ ಮಾದರಿಯೇ ಇರಲಿಲ್ಲ. 2014ರಲ್ಲಿ ಈ ದೇಶಕ್ಕೆ ಪರ್ಯಾಯ ಮಾದರಿ ಸಿಕ್ಕಿತು. ಈ ನೂತನ ಮಾದರಿಯು ‘ತುಷ್ಟೀಕರಣ’ ಬದಲಾಗಿ ‘ಸಂತುಷ್ಟೀಕರಣ‘ ಆಧಾರವಾಗಿದೆ
ಜಾತಿ ಎಂಬ ವಿಷವನ್ನು ಪಸರಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಒಬಿಸಿಗಳಿಗಾಗಿ ಆಯೋಗ ರಚಿಸುವಂತೆ ಎರಡೂ ಸದನಗಳ ಒಬಿಸಿ ಸಂಸದರು ಕಳೆದ ಮೂರು ದಶಕಗಳಿಂದ ಬೇಡಿಕೆ ಮಂಡಿಸುತ್ತಿದ್ದರು. ಅವರ ಬೇಡಿಕೆಯನ್ನು ತಿರಸ್ಕರಿಸಲಾಗುತ್ತಿತ್ತು. ಬಹುಶಃ ಈ ಬೇಡಿಕೆ ಕಾಂಗ್ರೆಸ್‌ನ ರಾಜಕಾರಣಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ನಮ್ಮ ಸರ್ಕಾರ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದೆ
ಮೀಸಲಾತಿ ವಿಚಾರ ಪ್ರಸ್ತಾಪಗೊಂಡಾಗಲೆಲ್ಲಾ ದೇಶದಲ್ಲಿ ಸಮುದಾಯಗಳ ಮಧ್ಯೆ ಕಂದಕ ಸೃಷ್ಟಿಸುವ ಕಾರ್ಯ ನಡೆಯುತ್ತಿತ್ತು. ಮೊಟ್ಟಮೊದಲ ಬಾರಿಗೆ ನಮ್ಮ ಸರ್ಕಾರ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ನೀಡಿದೆ. ಈ ಮೀಸಲಾತಿ ನೀಡುವಾಗ ಎಸ್‌ಸಿ ಎಸ್‌ಟಿ ಅಥವಾ ಒಬಿಸಿ ಸಮುದಾಯಗಳ ಮೀಸಲಾತಿಯನ್ನು ಕಸಿದುಕೊಂಡಿಲ್ಲ
ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಖ್ಯಾತ ಕವಿ ಮಜರೂಹ್ ಸುಲ್ತಾನಪುರಿ ನಟ ಬಲರಾಜ್ ಸಾಹ್ನಿ ಅವರನ್ನು ಬಂಧಿಸಲಾಗಿತ್ತು. ವಿ.ಡಿ.ಸಾವರ್ಕರ್ ಅವರಿಗೆ ಸಮರ್ಪಿಸಿದ ಗೀತೆ ಹಾಡಲು ಮುಂದಾಗಿದ್ದ ಗಾಯಕಿ ಲತಾ ಮಂಗೇಷ್ಕರ್ ಅವರ ಸಹೋದರನನ್ನು ಆಕಾಶವಾಣಿ ಕಾರ್ಯಕ್ರಮಗಳಿಂದ ನಿಷೇಧಿಸಲಾಗಿತ್ತು
ತುರ್ತು ಪರಿಸ್ಥಿತಿ ಪರವಾಗಿ ಮಾತನಾಡಲು ನಿರಾಕರಿಸಿದ್ದಕ್ಕಾಗಿ ನಟ ದೇವಾನಂದ್ ಅವರ ಚಿತ್ರಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡುವುದರ ಮೇಲೆ ನಿಷೇಧ ಹೇರಲಾಗಿತ್ತು. ಕಾಂಗ್ರೆಸ್ ಪರವಾಗಿ ಗೀತೆ ಹಾಡಲು ನಿರಾಕರಿಸಿದ್ದರಿಂದ ಕಿಶೋರ್ ಕುಮಾರ್ ಅವರ ಮೇಲೆಯೂ ನಿಷೇಧ ಹೇರಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.