ADVERTISEMENT

‘ನ್ಯಾಯಾಲಯಗಳಿಗೆ ಏಕರೂಪದ ವಿಡಿಯೊ ಕಾನ್ಫರೆನ್ಸ್‌ ವ್ಯವಸ್ಥೆ’

ರಾಜ್ಯಸಭೆಯಲ್ಲಿ ಸಚಿವ ಸಂಜಯ್‌ ಧೋತ್ರೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 15:04 IST
Last Updated 21 ಸೆಪ್ಟೆಂಬರ್ 2020, 15:04 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ದೇಶದಲ್ಲಿರುವ ಎಲ್ಲ ನ್ಯಾಯಾಲಯಗಳಿಗೆ ಏಕರೂಪದ ವಿಡಿಯೊ ಕಾನ್ಫರೆನ್ಸ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಸಂಜಯ್‌ ಧೋತ್ರೆ ರಾಜ್ಯಸಭೆಗೆ ತಿಳಿಸಿದರು.

ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ವಿವೇಕ್‌ ಕೆ ತನ್ಖಾ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ‘ಇ–ಕೋರ್ಟ್‌ ಯೋಜನೆಯಡಿ ನ್ಯಾಷನಲ್‌ ಇನ್ಫಾರ್ಮ್ಯಾಟಿಕ್ಸ್‌ ಕೇಂದ್ರವು(ಎನ್‌ಐಸಿ)ಇದನ್ನು ಅಭಿವೃದ್ಧಿಪಡಿಸುತ್ತಿದ್ದು, ವಿಡಿಯೊ ಕಾನ್ಫರೆನ್ಸ್‌ ವ್ಯವಸ್ಥೆಯನ್ನು ಬಾಹ್ಯ ಸಂಸ್ಥೆಯಿಂದ ಖರೀದಿಸಲಾಗುತ್ತಿದೆ. ದತ್ತಾಂಶಗಳ ರಕ್ಷಣೆ ಹಾಗೂ ಇದರ ಸಂಪೂರ್ಣ ನಿಯಂತ್ರಣವು ಎನ್‌ಐಸಿ ಬಳಿಯೇ ಇಟ್ಟುಕೊಳ್ಳುವ ಉದ್ದೇಶದಿಂದ ದೆಹಲಿಯಲ್ಲಿ ಇರುವ ರಾಷ್ಟ್ರೀಯ ದತ್ತಾಂಶ ಕೇಂದ್ರದ ಕ್ಲೌಡ್‌ನಲ್ಲಿ ಈ ವ್ಯವಸ್ಥೆ ಇರಲಿದೆ. ಮುಂದಿನ 10–12 ವಾರಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದರು.

‘ಆತ್ಮ ನಿರ್ಭರ್‌ ಭಾರತ ಅಭಿಯಾನದಡಿ, ಇಲಾಖೆಯು ಸ್ಪರ್ಧೆಯ ಮುಖಾಂತರ ಕೆಲ ಸ್ವದೇಶಿ ವಿಡಿಯೊ ಕಾನ್ಫರೆನ್ಸ್‌ ತಂತ್ರಜ್ಞಾನಗಳನ್ನು ಆಯ್ಕೆ ಮಾಡಿದೆ. ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಇವುಗಳ ಬಳಕೆಯ ಕುರಿತು ಅಧ್ಯಯನ ನಡೆಸಲು ಎನ್‌ಐಸಿಗೆ ಜವಾಬ್ದಾರಿ ನೀಡಲಾಗಿದೆ. ಇವುಗಳಲ್ಲಿ ಯಾವುದಾದರೂ ಸೂಕ್ತ ಎನಿಸಿದರೆ, ಹೈಕೋರ್ಟ್‌ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಇವುಗಳನ್ನು ಬಳಸುವ ಕುರಿತು ನಿರ್ಧರಿಸಲಾಗುವುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.