ADVERTISEMENT

₹ 2 ಕೋಟಿ ಮೊತ್ತದ ವಂಚನೆಗೆ ಕಾನೂನು ಕ್ರಮ: ಜಿಎಸ್‌ಟಿ ಮಂಡಳಿ

ಪಿಟಿಐ
Published 17 ಡಿಸೆಂಬರ್ 2022, 20:17 IST
Last Updated 17 ಡಿಸೆಂಬರ್ 2022, 20:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜಿಎಸ್‌ಟಿ ವಂಚನೆಯ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ಸಂಬಂಧಿಸಿದಂತೆ ವಂಚನೆಯ ಮೊತ್ತದ ಗರಿಷ್ಠ ಮಿತಿಯನ್ನು ₹ 1 ಕೋಟಿಯಿಂದ ₹ 2 ಕೋಟಿಗೆ ಹೆಚ್ಚಿಸಲು ಜಿಎಸ್‌ಟಿ ಮಂಡಳಿಯು ಶನಿವಾರ ಒಪ್ಪಿಗೆ ನೀಡಿದೆ. ಆದರೆ, ನಕಲಿ ಇನ್‌ವಾಯ್ಸ್‌ಗೆ ಸಂಬಂಧಿಸಿದ ಈಗಿರುವ ₹ 1 ಕೋಟಿ ಮಿತಿಯನ್ನು ಹಾಗೆಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಯಿತು. ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ಅಡಕವಾಗಿರುವ ಶಿಕ್ಷಾರ್ಹ ಅಪರಾಧಗಳಲ್ಲಿ ಕೆಲವೊಂದನ್ನು ಜಿಎಸ್‌ಟಿ ಕಾಯ್ದೆಯಿಂದ ತೆಗೆಯಲು ಮಂಡಳಿಯು ನಿರ್ಧರಿಸಿದೆ.

2017ರ ಸಿಜಿಎಸ್‌ಟಿ ಕಾಯ್ದೆಯ ಸೆಕ್ಷನ್‌ 132ರ ಅಡಿಯಲ್ಲಿ ಯಾವುದೇ ಅಧಿಕಾರಿಗೆ ಕರ್ತವ್ಯ ನಿರ್ವಹಿಸುವುದಕ್ಕೆ ಅಡ್ಡಿಪಡಿಸುವುದು, ಪುರಾವೆಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸುವುದು ಹಾಗೂ ಮಾಹಿತಿ ಒದಗಿಸುವುದರಲ್ಲಿ ವಿಫಲ ಆಗುವುದನ್ನು ಶಿಕ್ಷಾರ್ಹ ಅಪರಾಧಗಳ ಪಟ್ಟಿಯಿಂದ ಹೊರಗಿಡಲು ಮಂಡಳಿಯು ಶಿಫಾರಸು ಮಾಡಿದೆ ಎಂದು ರೆವೆನ್ಯು ಕಾರ್ಯದರ್ಶಿ ಸಂಜಯ್‌ ಮಲ್ಹೋತ್ರಾ ತಿಳಿಸಿದ್ದಾರೆ.

ADVERTISEMENT

ಮಂಡಳಿಯ ಕೆಲ ಶಿಫಾರಸುಗಳು

l ದ್ವಿದಳಧಾನ್ಯಗಳ ಹೊಟ್ಟಿನ ಮೇಲೆ ವಿಧಿಸುತ್ತಿದ್ದ ಜಿಎಸ್‌ಟಿಯನ್ನು ಕೈಬಿಡಲಾಗಿದೆ. ಸದ್ಯ ಶೇ 5ರಷ್ಟು ಜಿಎಸ್‌ಟಿ ಇತ್ತು

l ಪೆಟ್ರೋಲ್‌ ಜೊತೆ ಮಿಶ್ರಣ ಮಾಡಲು ಸಂಸ್ಕರಣಾಗಾರಗಳಿಗೆ ಪೂರೈಸುವ ಈಥೈಲ್ ಆಲ್ಕೊಹಾಲ್ ಮೇಲಿನ ಜಿಎಸ್‌ಟಿ ಶೇ 18 ರಿಂದ ಶೇ 5ಕ್ಕೆ ಇಳಿಕೆ

l ದಂಡದ ಮೊತ್ತವು ಸದ್ಯ ವಂಚನೆ ಮಾಡಿರುವ ತೆರಿಗೆ ಮೊತ್ತದ ಶೇ 50ರಿಂದ ಶೇ 100ರವರೆಗೆ ಇದ್ದು, ಅದನ್ನು ಶೇ 25ರಿಂದ ಶೇ 100ರವರೆಗೆ ನಿಗದಿಪಡಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.