ADVERTISEMENT

ವಿರೋಧ ಪಕ್ಷಗಳ ಪಾಳೆಯದಲ್ಲಿ ಬಿರುಕು

ಕಾಂಗ್ರೆಸ್‌ ‘ದೊಡ್ಡಣ್ಣ’ನ ವರ್ತನೆಗೆ ಪ್ರಾದೇಶಿಕ ಪಕ್ಷಗಳು ಗರಂ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 17:37 IST
Last Updated 17 ಸೆಪ್ಟೆಂಬರ್ 2020, 17:37 IST

ನವದೆಹಲಿ: ಲೋಕಸಭೆಯ ಚಳಿಗಾಲ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಒಗ್ಗೂಡಿ ಹೋರಾಟ ನಡೆಸಲು ನಿರ್ಧರಿಸಿದ್ದ ವಿರೋಧ ಪಕ್ಷಗಳ ಪಾಳೆಯದಲ್ಲಿ ಆರಂಭದಲ್ಲಿಯೇ ಒಡಕು ಮೂಡಿದೆ. ‘ಕಾಂಗ್ರೆಸ್‌ಪಕ್ಷದ ದೊಡ್ಡಣ್ಣ’ನ ವರ್ತನೆ ಖಂಡಿಸಿಪ್ರಾದೇಶಿಕ ಪಕ್ಷಗಳು ಅಂತರ ಕಾಯ್ದುಕೊಳ್ಳಲು ನಿರ್ಧರಿಸಿವೆ.

ರಾಜಧಾನಿಯಲ್ಲಿ ಗುರುವಾರ ನಡೆದ ರಾಜಕೀಯ ಬೆಳವಣಿಗೆಗಳು ವಿರೋಧ ಪಕ್ಷಗಳ ಒಡಕಿಗೆ ನಿದರ್ಶನವಾಗಿದ್ದವು. ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟು ಉಳಿದ ಪ್ರಾದೇಶಿಕ ಪಕ್ಷಗಳು ಜಂಟಿಯಾಗಿ ಹೋರಾಟ ನಡೆಸಿದವು.

‘ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಜತೆ‌ ಒಳ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್‌ ದೆಹಲಿಯಲ್ಲಿ ನಮ್ಮಿಂದ ಸಹಕಾರ ಬಯಸುತ್ತಿದೆ’ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ)‌ ಆರೋಪಿಸಿದೆ.

ADVERTISEMENT

ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಾಜ್ಯಗಳ ಪಾಲನ್ನು ಪಾವತಿಸುವಂತೆ ಒತ್ತಾಯಿಸಿ ಎಂಟು ಪ್ರಾದೇಶಿಕ ಪಕ್ಷಗಳು ಗುರುವಾರ ಜಂಟಿಯಾಗಿ ಸಂಸತ್‌ ಬಳಿಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದವು.

ಸ್ವಲ್ಪ ಸಮಯದ ಅಂತರದಲ್ಲಿಯೇರಾಷ್ಟ್ರಪತಿ ಭವನಕ್ಕೆ ತೆರಳಿದ ಕಾಂಗ್ರೆಸ್‌ ಮತ್ತು ಇತರ ನಾಲ್ಕು ಪಕ್ಷಗಳು, ದೆಹಲಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ನಡೆಸಿದ‌ ತನಿಖೆಯ ವಿರುದ್ಧ ರಾಷ್ಟ್ರಪತಿಗೆ ದೂರು ನೀಡಿದವು. ಅದಾದ ನಂತರ ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳ ವಿರುದ್ಧ ಕಾಂಗ್ರೆಸ್‌ ಏಕಾಂಗಿಯಾಗಿ ಪ್ರತಿಭಟನೆ ನಡೆಸಿತು.

ಈ ಮೂರು ಕೃಷಿ ಮಸೂದೆಗಳನ್ನು ಇತರ ವಿರೋಧ ಪಕ್ಷಗಳೂ ಕೂಡ ವಿರೋಧಿಸುತ್ತಿವೆ. ಆದರೆ, ಈ ಹೋರಾಟ
ದಲ್ಲಿ ಕಾಂಗ್ರೆಸ್‌ ಜತೆ ಕೈಜೋಡಿಸಲು ಯಾವ ಪಕ್ಷವೂ ಸಿದ್ಧವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.