
ನೀಮಚ್ (ಮಧ್ಯಪ್ರದೇಶ): ಇಲ್ಲಿನ ಕೆಲವು ಪ್ರದೇಶಗಳಲ್ಲಿ ಗೀಲನ್ ಬಾ ಸಿಂಡ್ರೋಮ್ (ಜಿಬಿಎಸ್) ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಜಿಬಿಎಸ್‌ನಿಂದ ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾನಸ ಪಟ್ಟಣದಲ್ಲಿ ಒಂದು ಡಜನ್‌ಗೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲು ಮತ್ತು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಜಿಬಿಎಸ್ ರೋಗಿಗಳಿಗೆ ವಿಶೇಷ ವಾರ್ಡ್ ಸ್ಥಾಪಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ರಾಜೇಂದ್ರ ಶುಕ್ಲಾ ಶನಿವಾರ ಜಿಲ್ಲಾ ಕೇಂದ್ರದಿಂದ 30 ಕಿ.ಮೀ ದೂರದಲ್ಲಿರುವ ಮಾನಸ ಪಟ್ಟಣಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶುಕ್ಲಾ , ಜನವರಿ 12 ರಂದು ಮಾನಸ ಪಟ್ಟಣದಲ್ಲಿ ಮೊದಲ ಜಿಬಿಎಸ್ ಪ್ರಕರಣಗಳು ಪತ್ತೆಯಾಗಿವೆ. ಅವರನ್ನು ಜೈಪುರ ಮತ್ತು ಅಹಮದಾಬಾದ್‌ನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುಮಾರು 35,000 ಜನಸಂಖ್ಯೆಯನ್ನು ಹೊಂದಿರುವ ಈ ಪಟ್ಟಣದಲ್ಲಿ ಇದುವರೆಗೆ 14 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ದುರದೃಷ್ಟವಶಾತ್ ಇಬ್ಬರು ಮೃತಪಟ್ಟಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ರೋಗಿಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. ಮಾನಸ ಪಟ್ಟಣದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲು, ಸರ್ಕಾರಿ ಆಸ್ಪತ್ರೆಯಲ್ಲಿ ಜಿಬಿಎಸ್ ರೋಗಿಗಳಿಗೆ ವಿಶೇಷ ವಾರ್ಡ್ ರಚಿಸಲು, ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲು, ಔಷಧ ಮತ್ತು ಚುಚ್ಚುಮದ್ದಿನ ಸಾಕಷ್ಟು ದಾಸ್ತಾನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಜಿಬಿಎಸ್ ಹರಡುವಿಕೆಯನ್ನು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾನಸ ನಿವಾಸಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜನರ ಆರೋಗ್ಯ ಪರಿಶೀಲಿಸಲು ಮನೆ-ಮನೆಗೆ ತೆರಳಿ ತಪಾಸಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ದೇಹದ ಪ್ರತಿರೋಧ ವ್ಯವಸ್ಥೆಯು ನರಮಂಡಲದ ಮೇಲೆ ದಾಳಿ ಮಾಡುವ ವಿಚಿತ್ರ ಕಾಯಿಲೆ ಇದು. ಪಾದಗಳು ಮತ್ತು ಕೈಗಳು ಜೋಮು ಹಿಡಿಯುವುದರೊಂದಿಗೆ ಜಿಬಿಎಸ್ ಆರಂಭವಾಗುತ್ತದೆ. ನಂತರದಲ್ಲಿ ಸ್ನಾಯು ದೌರ್ಬಲ್ಯ ಉಂಟಾಗಿ, ಕೀಲುಗಳಲ್ಲಿ ಭಾರಿ ನೋವು ಕಾಣಿಸಿಕೊಳ್ಳುತ್ತದೆ. ಎರಡರಿಂದ ನಾಲ್ಕು ವಾರಗಳಲ್ಲಿ ಭುಜ ಮತ್ತು ಕಾಲುಗಳಿಗೆ ನೋವು ಹರಡುವುದರೊಂದಿಗೆ ಲಕ್ಷಣಗಳು ತೀವ್ರಗೊಳ್ಳುತ್ತವೆ. ರೋಗದ ತೀವ್ರತೆ, ಚಿಕಿತ್ಸೆಯ ಲಭ್ಯತೆ ಮತ್ತು ಗುಣಮಟ್ಟವನ್ನು ಆಧರಿಸಿ ಮರಣದ ಪ್ರಮಾಣವು ಶೇ 3ರಿಂದ ಶೇ 7ರವರೆಗೆ ಇರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಮಳೆಗಾಲದಲ್ಲಿ, ಕೋಳಿಗಳು ಮತ್ತು ಬಾತುಕೋಳಿಗಳ ಹಿಕ್ಕೆಗಳಿಂದ ಮಲಿನಗೊಂಡಿದ್ದ ನೀರಿನಲ್ಲಿ ಆಡಿದ ಮಕ್ಕಳಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡ ನಿದರ್ಶನಗಳಿವೆ. ಕಲುಷಿತ ನೀರಿನಲ್ಲಿ ತಯಾರಿಸಿದ ಆಹಾರ, ತಿಂಡಿ ತಿನ್ನುವುದು, ಕೋಳಿ ಮಾಂಸವನ್ನು ಅರೆಬರೆ ಬೇಯಿಸಿ ತಿನ್ನುವುದು ಕೂಡ ಸೋಂಕಿಗೆ ಕಾರಣವಾಗಬಹುದು ಎಂದಿದ್ದಾರೆ ವೈದ್ಯರು.
ಇದು ತೀರಾ ಅಪಾಯಕಾರಿ ಕಾಯಿಲೆ ಅಲ್ಲ. ಆದರೆ, ಈ ರೋಗಕ್ಕೆ ನಿರ್ದಿಷ್ಟ ಔಷಧ ಇಲ್ಲದಿರುವುದರಿಂದ ಜನ ಆದಷ್ಟು ಎಚ್ಚರಿಕೆಯಿಂದ ಇರುವುದು ಒಳಿತು ಎನ್ನುವುದು ತಜ್ಞರ ಎಚ್ಚರಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.