ADVERTISEMENT

ಗುಜರಾತ್‌: ಐಎಸ್‌ ಸೇರಲು ಹೊರಟಿದ್ದ ಮಹಿಳೆ ಸೇರಿ ನಾಲ್ವರ ಬಂಧನ

ಪಿಟಿಐ
Published 10 ಜೂನ್ 2023, 16:16 IST
Last Updated 10 ಜೂನ್ 2023, 16:16 IST
   

ಅಹಮದಾಬಾದ್‌: ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರಗಾಮಿ ಸಂಘಟನೆಯನ್ನು ಸೇರಲು ಸಂಚು ಮಾಡಿದ್ದ ನಾಲ್ವರನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಬಂಧಿಸಿದೆ.

ಅವರಲ್ಲಿ ಒಬ್ಬರು ಸೂರತ್‌ನ ಮಹಿಳೆಯೂ ಇದ್ದಾರೆ. ಅವರನ್ನು ‍ಪೋರಬಂದರ್‌ನಲ್ಲಿ ಬಂಧಿಸಲಾಯಿತು ಎಟಿಎಸ್‌ ಶನಿವಾರ ತಿಳಿಸಿದೆ.   ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನಿವಾಸಿಗಳಾದ ಉಬೇದ್ ನಾಸಿರ್ ಮೀರ್, ಹನಾನ್ ಹಯಾತ್ ಶಾಹುಲ್, ಮೊಹಮದ್‌ ಹಾಜೀಮ್ ಶಾ ಹಾಗೂ ಸೂರತ್‌ನ ಸುಮೈರಾ ಬಾನು ಮಲಿಕ್‌ ಬಂಧಿತರು. 

ಈ ನಾಲ್ವರು 20ರಿಂದ 30ರೊಳಗಿನ ವಯಸ್ಸಿನವರು. ಇರಾನ್‌ ಮೂಲಕ ಅಫ್ಗಾನಿಸ್ತಾನಕ್ಕೆ ತೆರಳಿ ಐಎಸ್‌ ಸೇರಲು ಇವರು ಯೋಜನೆ ರೂಪಿಸಿಕೊಂಡಿದ್ದರು ಎನ್ನಲಾಗಿದೆ.   ಸೂರತ್‌ನಲ್ಲಿರುವ ಸುಮೈರಾ ನಿವಾಸದ ಮೇಲೆ ದಾಳಿ ನಡೆಸಿ, ‘ವಾಯ್ಸ್‌ ಆಫ್ ಖೊರಾಸನ್‌’ ನಿಯತಕಾಲಿಕ ಸೇರಿದಂತೆ ಉಗ್ರಗಾಮಿ ಸಂಘಟನೆಗೆ ಸಂಬಂಧಿಸಿದ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಐಎಸ್‌ ಜೊತೆಗೆ ನಿಕಟ ಸಂಪರ್ಕದಲ್ಲಿರುವ, ಶ್ರೀನಗರ ನಿವಾಸಿ ಜುಬೈರ್ ಮುನ್ಶಿ ಜೊತೆ ಒಡನಾಟ ಹೊಂದಿರುವುದಾಗಿ ಸುಮೈರಾ ಎಟಿಎಸ್‌ಗೆ ಹೇಳಿಕೆ ನೀಡಿದ್ದಾಳೆ.  

ADVERTISEMENT

‘ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯ 38 ಮತ್ತು 39ನೇ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಭಯೋತ್ಪಾದನಾ ನಿಗ್ರಹ ದಳದ ಡಿಐಜಿ ದೀಪನ್ ಭದ್ರನ್ ತಿಳಿಸಿದ್ದಾರೆ.    ‘ಬಂಧಿತ ಕಾಶ್ಮೀರಿ ಯುವಕರಿಂದ ಹಲವು ದಾಖಲೆಗಳು, ಮೊಬೈಲ್‌ ಫೋನ್‌, ಟ್ಯಾಬ್, ಚಾಕು ವಶಪಡಿಸಿಕೊಳ್ಳಲಾಗಿದೆ. ಇವರ ಕ್ಲೌಡ್‌ ಸಂಗ್ರಹದಲ್ಲಿ ಹಲವು ಫೋಟೊ, ವಿಡಿಯೊ, ಆಡಿಯೊಗಳು ಸಿಕ್ಕಿವೆ’ ಎಂದು ಎಟಿಎಸ್ ತಿಳಿಸಿದೆ.

‘ಅಬು ಹಮ್ಜಾ ನಿರ್ದೇಶನದಂತೆ ಪೋರಬಂದರಿನಿಂದ ಇರಾನ್‌ಗೆ ಹೋಗುವ ಯೋಜನೆ ರೂಪಿಸಿಕೊಂಡಿದ್ದೆವು. ಇದಕ್ಕೆ ಪೂರ್ವ ತಯಾರಿಯೂ ನಡೆದಿತ್ತು. ಇರಾನ್ ಮೂಲಕ ಅಫ್ಗಾನಿಸ್ತಾನಕ್ಕೆ ಹೋಗಿ ಅಲ್ಲಿ ಐಎಸ್‌ ಸಂಘಟನೆ ಮೂಲಕ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗುವುದು ನಮ್ಮ ಉದ್ದೇಶವಾಗಿತ್ತು’ ಎಂದು ಬಂಧಿತ ಯುವಕರು ತಿಳಿಸಿದ್ದಾರೆ ಎಂದು ಎಟಿಎಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.