ಅಹಮದಾಬಾದ್:ಅಪರಿಚಿತ ವ್ಯಕ್ತಿಗಳು‘ಹೊಸ ಸಂವಿಧಾನ’ ಹೆಸರಿನಲ್ಲಿ ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಮುಖ್ಯಸ್ಥ ಮೋಹನ್ ಭಾಗವತ್ ಚಿತ್ರವುಳ್ಳ ಕಿರುಪುಸ್ತಕ ಹಂಚಿಕೆ ಮಾಡುತ್ತಿದ್ದಾರೆ ಎಂದು ಸಂಘದ ಗುಜರಾತ್‌ನ ಸದಸ್ಯರೊಬ್ಬರು ದೂರು ದಾಖಲಿಸಿದ್ದಾರೆ.ಆರ್‌ಎಸ್‌ಎಸ್‌ನ ಮಣಿನಗರ ಕಚೇರಿಯ ಆಡಳಿತಗಾರರಲ್ಲಿ ಒಬ್ಬರೂ ಆಗಿರುವ, ವಕೀಲ ದಿನೇಶ್ ವಾಲಾ ಎಂಬುವವರು ದೂರು ದಾಖಲಿಸಿದ್ದು, ಇದರ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
‘ಹೊಸ ಸಂವಿಧಾನ’ದ ಅಡಿಯಲ್ಲಿ ನಿರ್ದಿಷ್ಟ ಧರ್ಮವೊಂದಕ್ಕೆ ಹೆಚ್ಚು ಪ್ರಾಬಲ್ಯ ನೀಡಲಾಗಿದೆ. ಮಹಿಳೆಯರು ಮತ್ತು ಅಸ್ಪೃಶ್ಯರಿಗೆ ಮತದಾನದ ಹಕ್ಕಿರುವುದಿಲ್ಲ ಎಂದುಕಿರುಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
‘ಕಿರುಪುಸ್ತಕ ಸಿದ್ಧಪಡಿಸಿದ ವ್ಯಕ್ತಿ ಸಂವಿಧಾನದ ಮಹತ್ವವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಧರ್ಮ ಮತ್ತು ಜಾತಿಯ ಆಧಾರದಲ್ಲಿ ಸಮಾಜವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಯಾರೋ ದೇಶವನ್ನು ಅರಾಜಕತೆಯತ್ತ ದೂಡಲು ಸಂಚುಹೂಡುತ್ತಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ. ಕಿರುಪುಸ್ತಕದಲ್ಲಿರುವ ಅಂಶಗಳಿಂದ ಆರ್‌ಎಸ್‌ಎಸ್ ಮತ್ತು ಮೋಹನ್ ಭಾಗವತ್ ಅವರಿಗೆ ಅವಮಾನವಾಗಿದೆ’ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಕಿರುಪುಸ್ತಕದ ಪಿಡಿಎಫ್ ಪ್ರತಿಯೊಂದು ವಾಟ್ಸ್‌ಆ್ಯಪ್ ಮೂಲಕ ತಮಗೆ ದೊರೆತಿದೆ. ಅದರಲ್ಲಿ ಅವಹೇಳನಕಾರಿ ಮತ್ತು ಪ್ರಚೋದನಾತ್ಮಕ ಅಂಶಗಳಿದ್ದವು’ ಎಂದುದಿನೇಶ್ ವಾಲಾ ಹೇಳಿದ್ದಾರೆ.
‘ಇದು ಸಂವಿಧಾನದ ಸಂಕ್ಷಿಪ್ತ ರೂಪ. ವಿಸ್ತೃತ ರೂಪ ಸಿದ್ಧವಾಗುತ್ತಿದೆ. ಜನರು ತಮ್ಮ ಅಭಿಪ್ರಾಯ, ಸಲಹೆಗಳನ್ನು 2020ರ ಮಾರ್ಚ್ 15ರ ಒಳಗೆ ನವದೆಹಲಿಯಲ್ಲಿರುವ ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಬಹುದು. ಮತ್ತೊಂದು ಪ್ರತಿಯನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಕಚೇರಿಗೆ ಕಳುಹಿಸಿಕೊಡಬಹುದು. ಒಳ್ಳೆಯ ಸಲಹೆಗೆ ₹ 10 ಸಾವಿರ ಬಹುಮಾನ ನೀಡಲಾಗುವುದು’ ಎಂಬುದಾಗಿಯೂ ಕಿರುಪುಸ್ತಕದಲ್ಲಿದೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.