ಗಾಂಧಿನಗರ: ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ತಮ್ಮ ಸಂಪುಟದ ಮೆಗಾ ಪುನರ್ ರಚನೆಯಲ್ಲಿ 19 ಮಂದಿ ಹೊಸಬರನ್ನು ತಮ್ಮ ಮಂತ್ರಿಪರಿಷತ್ತಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ತಮ್ಮ ಹಿಂದಿನ ಸಂಪುಟದಲ್ಲಿ ಸಚಿವರಾಗಿದ್ದ 6 ಮಂದಿಯನ್ನು ಮರುಸೇರ್ಪಡೆ ಮಾಡಿಕೊಂಡಿದ್ದಾರೆ.
ಉಪಮುಖ್ಯಮಂತ್ರಿಯಾಗಿ ಹರ್ಷ ಸಾಂಘ್ವಿಗೆ ಬಡ್ತಿ ನೀಡಲಾಗಿದೆ. ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಅವರಿಗೆ ಅಚ್ಚರಿಯ ಅವಕಾಶ ಸಿಕ್ಕಿದೆ. ಗುಜರಾತ್‌ನ ಮಂತ್ರಿಪರಿಷತ್ತಿನ ಸಂಖ್ಯೆ ಈಗ ಸಿಎಂ ಸೇರಿ 26ಕ್ಕೆ ಏರಿಕೆಯಾಗಿದೆ. ಈ ಹಿಂದೆ 17 ಮಂದಿ ಇದ್ದರು.
182 ಸದಸ್ಯರ ವಿಧಾನಸಭೆ ಹೊಂದಿರುವ ಗುಜರಾತ್‌ನಲ್ಲಿ ಗರಿಷ್ಠ 27 ಮಂತ್ರಿಗಳು(ಸದನದ ಒಟ್ಟು ಸದಸ್ಯರ ಸಂಖ್ಯೆಯ ಶೇ 15ರಷ್ಟು) ಇರಬಹುದು. 2027ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ಎರಡು ವರ್ಷಗಳ ಮೊದಲು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೆಲ ತಿಂಗಳು ಮೊದಲು ಸಂಪುಟ ಪುನರ್ ರಚನೆ ನಡೆದಿದೆ.
ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಎಲ್ಲ ಹೊಸ ಸಚಿವರಿಗೆ ಮತ್ತು ಸಂಪುಟ ದರ್ಜೆಗೆ ಬಡ್ತಿ ಪಡೆದ ಅಥವಾ ಸ್ವತಂತ್ರ ಉಸ್ತುವಾರಿ ಸಚಿವರಿಗೆ ಪ್ರಮಾಣ ವಚನ ಮತ್ತು ಗೌಪ್ಯತೆಯನ್ನು ಬೋಧಿಸಿದರು.
ಹಿಂದಿನ ಸಂಪುಟದಲ್ಲಿ ಗೃಹ ಖಾತೆ ರಾಜ್ಯ ಸಚಿವರಾಗಿದ್ದ ಸೂರತ್‌ನ ಮಜುರಾ ಕ್ಷೇತ್ರದ ಶಾಸಕ ಸಾಂಘ್ವಿ, ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಅವರ ನಾಲ್ಕು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯನ್ನು ನೇಮಕ ಮಾಡಲಾಗಿದೆ. 2021ರಲ್ಲಿ ವಿಜಯ್ ರೂಪಾನಿ ಮುಖ್ಯಮಂತ್ರಿಯಾಗಿದ್ದಾಗ, ಡಿಸಿಎಂ ಸ್ಥಾನದಲ್ಲಿ ನಿತಿನ್ ಪಟೇಲ್ ಇದ್ದರು.
ಸಾಂಘ್ವಿ ಸೇರಿ 6 ಮಂದಿಯನ್ನು ಸಂಪುಟದಲ್ಲಿ ಉಳಿಸಿಕೊಳ್ಳಲಾಗಿದೆ. ಸಂಪುಟ ಪುನರ್ ರಚನೆ ಹಿನ್ನೆಲೆ 16 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಈ 6 ಮಂತ್ರಿಗಳ ರಾಜೀನಾಮೆಯನ್ನು ಮುಖ್ಯಮಂತ್ರಿ ಅಂಗೀಕರಿಸಿರಲಿಲ್ಲ ಎಂದು ವರದಿ ತಿಳಿಸಿದೆ.
ಈ ಆರು ಜನರಲ್ಲಿ ಕನುಭಾಯಿ ಪಟೇಲ್, ಋಷಿಕೇಶ್ ಪಟೇಲ್ ಮತ್ತು ಕುನ್ವರ್ಜಿ ಬವಾಲಿಯಾ ಈ ಹಿಂದೆ ಕ್ಯಾಬಿನೆಟ್ ಸಚಿವರಾಗಿದ್ದರು. ಸಾಂಘವಿ, ಪ್ರಫುಲ್ ಪನ್ಶೇರಿಯಾ ಮತ್ತು ಪುರುಷೋತ್ತಮ್ ಸೋಲಂಕಿ ರಾಜ್ಯ ಸಚಿವರಾಗಿದ್ದರು. ಅವರಲ್ಲಿ, ಉಪಮುಖ್ಯಮಂತ್ರಿ ಹುದ್ದೆಗೆ ಬಡ್ತಿ ಪಡೆದಿರುವ ಸಾಂಘ್ವಿ ಮತ್ತು ಸ್ವತಂತ್ರ ಉಸ್ತುವಾರಿ ಹೊಂದಿರುವ ಪನ್ಶೇರಿಯಾ ಮಾತ್ರ ಶುಕ್ರವಾರ ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಈ ತಿಂಗಳ ಆರಂಭದಲ್ಲಿ ರಾಜ್ಯ ಬಿಜೆಪಿ ಘಟಕದ ಹೊಸ ಅಧ್ಯಕ್ಷರಾಗಿ ನೇಮಕಗೊಂಡ ಜಗದೀಶ್ ವಿಶ್ವಕರ್ಮ ಅವರನ್ನೂ ಸಂಪುಟದಿಂದ ಕೈಬಿಡಲಾಗಿದೆ. ಒಬ್ಬರಿಗೆ ಒಂದು ಹುದ್ದೆ ಎಂಬುದು ಬಿಜೆಪಿ ನೀತಿ ಆಗಿರುವ ಕಾರಣ ಅವರನ್ನು ಸಂಪುಟದಲ್ಲಿ ಉಳಿಸಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕ್ರಿಕೆಟಿಗ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಸಂಪುಟಕ್ಕೆ ಅಚ್ಚರಿಯ ಪ್ರವೇಶವಾಗಿದೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ರವೀಂದ್ರ ಜಡೇಜಾ ಮತ್ತು ಅವರ ಮಗಳು ಭಾಗವಹಿಸಿದ್ದರು.
ಈಗ ಗುಜರಾತ್ ಮಂತ್ರಿಪರಿಷತ್ತಿನಲ್ಲಿರುವ 25 ಸಚಿವರಲ್ಲಿ ಒಂಬತ್ತು ಮಂದಿ ಕ್ಯಾಬಿನೆಟ್ ದರ್ಜೆಯವರಾಗಿದ್ದು, ಮೂವರು ಸ್ವತಂತ್ರ ಉಸ್ತುವಾರಿ ರಾಜ್ಯ ಸಚಿವರಾಗಿದ್ದು, 13 ಮಂದಿ ರಾಜ್ಯ ಸಚಿವರಾಗಿದ್ದಾರೆ.ಹಿಂದಿನ ಸಂಪುಟದಲ್ಲಿ ಒಬ್ಬರು ಮಹಿಳೆಯಿದ್ದರು. ಸಂಪುಟ ವಿಸ್ತರಣೆ ಬಳಿಕೆ ಮಹಿಳೆಯರ ಸಂಖ್ಯೆ ಮೂರಕ್ಕೆ ಏರಿದೆ.
ನೂತನ ಸಚಿವರಿಗೆ ಇನ್ನಷ್ಟೇ ಖಾತೆ ಹಂಚಿಕೆ ಆಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.