ಮುಖ್ಯಮಂತ್ರಿ ಭೂಪೇಂದ್ರ ಪಟೇಲ್
ಗಾಂಧಿನಗರ/ಅಹಮದಾಬಾದ್: ಗುಜರಾತ್ ಸಚಿವ ಸಂಪುಟದ ಪುನರ್‌ರಚನೆ ಶುಕ್ರವಾರ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಂಪುಟದ 16 ಸಚಿವರು ಗುರುವಾರ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಅವರನ್ನು ಬಿಟ್ಟು ಉಳಿದ ಎಲ್ಲ ಸಚಿವರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
‘ಭೂಪೇಂದ್ರ ಪಟೇಲ್ ಅವರು ಶುಕ್ರವಾರ ಬೆಳಿಗ್ಗೆ 11.30ಕ್ಕೆ ಸಂಪುಟ ಪುನರ್‌ರಚನೆ ಮಾಡಲಿದ್ದಾರೆ’ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ರಾಜ್ಯ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿ 17 ಸಚಿವರಿದ್ದರು. ಇವರಲ್ಲಿ ಎಂಟು ಸಚಿವರಿಗೆ ಸಂಪುಟ ದರ್ಜೆ, ಉಳಿದವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗಿತ್ತು.
ಗುಜರಾತ್ ವಿಧಾನಸಭೆಯು 182 ಸದಸ್ಯ ಬಲವನ್ನು ಹೊಂದಿದ್ದು, ಗರಿಷ್ಠ 27 (ಸದನದ ಸದಸ್ಯ ಬಲದ ಶೇ 15ರಷ್ಟು) ಸಚಿವರನ್ನು ಹೊಂದಲು ಅವಕಾಶವಿದೆ. ಭೂಪೇಂದ್ರ ಪಟೇಲ್ ಅವರು 2022ರ ಡಿಸೆಂಬರ್ 12ರಂದು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಈ ತಿಂಗಳ ಆರಂಭದಲ್ಲಿ ರಾಜ್ಯ ಬಿಜೆಪಿ ಘಟಕದ ಹೊಸ ಅಧ್ಯಕ್ಷರಾಗಿ ಸಚಿವ ಜಗದೀಶ್ ವಿಶ್ವಕರ್ಮ ನೇಮಕಗೊಂಡಿದ್ದಾರೆ. ಅದರ ಬೆನ್ನಲ್ಲೇ ಸಂಪುಟ ಪುನರ್‌ರಚನೆ ಮುಹೂರ್ತ ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.