ADVERTISEMENT

ಪಾಟೀದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಬಂಧನಕ್ಕೆ ವಾರಂಟ್‌

ಪಿಟಿಐ
Published 16 ಫೆಬ್ರುವರಿ 2023, 11:03 IST
Last Updated 16 ಫೆಬ್ರುವರಿ 2023, 11:03 IST
   

ಸುರೇಂದ್ರನಗರ: ಪಾಟೀದಾರ್‌ ಸಮುದಾಯದ ನಾಯಕ, ಬಿಜೆಪಿ ಶಾಸಕ ಹಾರ್ದಿಕ್‌ ಪಟೇಲ್‌ ವಿರುದ್ಧ ಗುಜರಾತಿನ ಸುರೇಂದ್ರನಗರದ ನ್ಯಾಯಾಲಯವು ಬಂಧನದ ವಾರಂಟ್‌ ಹೊರಡಿಸಿದೆ.

2017ರ ಗುಜರಾತ್‌ ವಿಧಾನಸಭಾ ಚುನಾವಣೆಗೂ ಮುನ್ನ ಜಿಲ್ಲೆಯ ಗ್ರಾಮವೊಂದರಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿ ರಾಜಕೀಯ ಭಾಷಣ ಮಾಡಿದ ಕಾರಣಕ್ಕೆ ಹಾರ್ದಿಕ್‌ ವಿರುದ್ಧ ಪ್ರಕರಣ ದಾಖಲಾಗಿತ್ತು.

ವಿಚಾರಣೆಗೆ ಹಾರ್ದಿಕ್‌ ಪಟೇಲ್‌ ಗೈರಾದ ಕಾರಣ ಹೆಚ್ಚುವರಿ ಸಿಜೆಎಂ ನ್ಯಾಯಾಧೀಶ ಡಿ.ಡಿ.ಶಾ ಅವರು, ಪಟೇಲ್‌ ವಿರುದ್ಧ ಬಂಧನದ ವಾರಂಟ್‌ ಹೊರಡಿಸಿದ್ದಾರೆ. ಮುಂದಿನ ವಿಚಾರಣೆಗೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಧ್ರಾಂಗದರಾ ತಾಲ್ಲೂಕಿನ ಪೊಲೀಸ್‌ ಠಾಣೆಯ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

ADVERTISEMENT

ನ್ಯಾಯಾಲಯದ ಆದೇಶ ಫೆ. 11ರಂದು ತಲುಪಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಹರಿಪರ್‌ ಗ್ರಾಮದಲ್ಲಿ 2017ರ ನವೆಂಬರ್‌ 26ರಂದು ಸಭೆ ಆಯೋಜಿಸಲು ವಿಧಿಸಿದ್ದ ಷರತ್ತುಗಳನ್ನು ಹಾರ್ದಿಕ್‌ ಪಟೇಲ್‌ ಮತ್ತು ಸಹ ಆರೋಪಿ ಕೌಶಿಕ್‌ ಪಟೇಲ್‌ ಉಲ್ಲಂಘಿಸಿದ್ದಾರೆ ಎಂದು ಪೊಲೀಸರು 2018ರ ಜನವರಿ 12ರಂದು ಪ್ರಕರಣ ದಾಖಲಿಸಿದ್ದರು.

2017ರ ನವೆಂಬರ್‌ನಲ್ಲಿ ಧುತಾರ್ಪರ್‌ ಗ್ರಾಮದಲ್ಲೂ ಸರ್ಕಾರದ ಆದೇಶ ಉಲ್ಲಂಘಿಸಿ ರಾಜಕೀಯ ಭಾಷಣ ಮಾಡಿದ್ದರು ಎಂದು ಆರೋಪಿಸಿ ಹಾರ್ದಿಕ್‌ ಪಟೇಲ್‌ ವಿರುದ್ಧ ದೂರು ದಾಖಲಾಗಿತ್ತು. ಅವರು ಈ ಪ್ರಕರಣದಿಂದ ಕಳೆದ ವಾರವಷ್ಟೇ ಖುಲಾಸೆಯಾಗಿದ್ದರು.

ಆ ವೇಳೆ ಹಾರ್ದಿಕ್‌ ಪಟೇಲ್‌ ಅವರು ಪಾಟೀದಾರ್‌ ಅನಾಮತ್‌ ಆಂದೋಲನ ಸಮಿತಿ ಮುಖ್ಯಸ್ಥರಾಗಿದ್ದರು. ಈ ಸಮಿತಿ ನೇತೃತ್ವದಲ್ಲಿ ಪಾಟೀದಾರ್‌ ಯುವ ಸಮುದಾಯಕ್ಕೆ ಒಬಿಸಿ ಮೀಸಲಾತಿ ಬೇಕೆಂದು ಆಗ್ರಹಿಸಿ ಅವರು ರಾಜ್ಯವ್ಯಾಪಿ ಹೋರಾಟಗಳನ್ನು ನಡೆಸಿದ್ದರು. ಇದು ಹಿಂಸಾಚಾರಕ್ಕೂ ತಿರುಗಿತ್ತು.

ಇದರ ಬೆನ್ನಲ್ಲೇ ಪಟೇಲ್‌ ಅವರು 2019ರಲ್ಲಿ ಕಾಂಗ್ರೆಸ್‌ ಸೇರಿದ್ದರು. 2022ರ ಗುಜರಾತ್‌ ವಿಧಾನಸಭಾ ಚುನಾವಣೆಗೂ ಮುನ್ನ ಅವರು ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರಿದ್ದರು. ಬಳಿಕ ಅವರು ಅಹಮದಾಬಾದ್‌ನ ವಿರಾಮಗಾಮ್‌ ಕ್ಷೇತ್ರದಿಂದ ಬಿಜೆಪಿಯ ಶಾಸಕರಾಗಿ ಆಯ್ಕೆಯಾದರು.

ಗುಜರಾತಿನಲ್ಲಿ ಹಾರ್ದಿಕ್‌ ಪಟೇಲ್‌ ವಿರುದ್ಧ ಎರಡು ದೇಶದ್ರೋಹ ಪ್ರಕರಣಗಳೂ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.