ADVERTISEMENT

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಮಿತಿ ರಚನೆ

ಚುನಾವಣೆಗೆ ಮುನ್ನ ಗುಜರಾತ್‌ ಸರ್ಕಾರದ ಮಹತ್ವದ ತೀರ್ಮಾನ

ಪಿಟಿಐ
Published 29 ಅಕ್ಟೋಬರ್ 2022, 14:35 IST
Last Updated 29 ಅಕ್ಟೋಬರ್ 2022, 14:35 IST

ಅಹಮದಾಬಾದ್‌: ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿಗೊಳಿಸುವ ಸಂಬಂಧ ಸಮಿತಿ ರಚಿಸಲು ಗುಜರಾತ್‌ ಸರ್ಕಾರ ನಿರ್ಧರಿಸಿದೆ.

ಶನಿವಾರ ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಮಿತಿ ರಚಿಸುವ ಮಹತ್ವದ ತೀರ್ಮಾನವನ್ನು ಸರ್ಕಾರ ಕೈಗೊಂಡಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದಕ್ಕೂ ಮೊದಲೇ ಸಮಿತಿ ರಚನೆಯ ಆದೇಶ ಹೊರಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಹಮದಾಬಾದ್‌ಗೆ ಭೇಟಿ ನೀಡಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಆ ಬಳಿಕ ಯಾವುದೇ ಸಂದರ್ಭದಲ್ಲಿ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.

‘ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯಲ್ಲಿ ಮೂರರಿಂದ ನಾಲ್ಕು ಸದಸ್ಯರು ಇರಲಿದ್ದಾರೆ. ಸಮಿತಿಗೆ ಸದಸ್ಯರನ್ನು ನೇಮಕ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರಿಗೆ ಸಚಿವ ಸಂಪುಟ ಸಭೆ ನೀಡಿದೆ’ ಎಂದು ಗುಜರಾತ್‌ನ ಗೃಹ ಸಚಿವ ಹರ್ಷ ಸಂಘವಿ ಮತ್ತು ಕೇಂದ್ರ ಸಚಿವ ಪುರುಷೋತ್ತಮ ರೂಪಾಲಾ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಸಂವಿಧಾನದ 4ನೇ ಭಾಗದ 44ನೇ ವಿಧಿಯ ನಿಬಂಧನೆಗಳ ಅನ್ವಯ ಈ ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲಾ ನಾಗರಿಕರಿಗೆ ಅನ್ವಹಿಸುವಂತೆ ಏಕರೂಪ ಕಾನೂನನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಇದರಲ್ಲಿ ಅವಕಾಶವಿದ್ದು, ಇದೊಂದು ಐತಿಹಾಸಿಕ ನಿರ್ಧಾರ ಎಂಬುದಾಗಿ ಸಂಘವಿ ತಿಳಿಸಿದರು.

'ಏಕರೂಪ ನೀತಿ ಸಂಹಿತೆಯನ್ನು ಜಾರಿಗೊಳಿಸಬೇಕು ಎಂಬುದು ಸಾರ್ವಜನಿಕರ ಮತ್ತು ಪಕ್ಷದ ಕಾರ್ಯಕರ್ತರ ಆಶಯವಾಗಿದ್ದು, ಅದನ್ನು ನಮ್ಮ ಸರ್ಕಾರ ಗೌರವಿಸಿದೆ’ ಎಂದು ಅವರು ಹೇಳಿದರು.

ಪ್ರಸ್ತಾವಿತ ಯುಸಿಸಿಯು ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಸಚಿವ ರೂಪಾಲಾ ಸಮರ್ಥಿಸಿಕೊಂಡರು.

‘ಹಿಂದೂ ವಿವಾಹ ಕಾಯಿದೆ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನುಗಳು ಸಂವಿಧಾನದ ಭಾಗವಾಗಿರದ ಕಾರಣ ಅವು ಯುಸಿಸಿಯ ವ್ಯಾಪ್ತಿಗೆ ಒಳಪಡುತ್ತವೆ. ಜನರ ಮೂಲಭೂತ ಹಕ್ಕುಗಳನ್ನು ಅತಿಕ್ರಮಿಸುವುದು ನಮ್ಮ ಉದ್ದೇಶ ಅಲ್ಲ’ ಎಂದೂ ಅವರು ವಿವರಿಸಿದರು.

ಯುಸಿಸಿ ಜಾರಿಗೊಳಿಸುವುದಾಗಿ ಹೇಳುವ ಮೂಲಕ ಹಿಂದೂಗಳನ್ನು ಧ್ರುವೀಕರಿಸಲು ಬಿಜೆಪಿಯು ಪ್ರಯತ್ನಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ನಿರ್ಧಾರಕ್ಕೂ ಮುಂಬರುವ ಚುನಾವಣೆಗೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಯುಸಿಸಿಗೆ ಸಂಬಂಧಿಸಿದ ವಿಷಯಗಳನ್ನು ಸಮಿತಿಯು ಮೌಲ್ಯಮಾಪನ ಮಾಡಿ ವರದಿ ಸಲ್ಲಿಸಲಿದೆ. ಬಳಿಕ ಅದನ್ನು ಜಾರಿಗೊಳಿಸುವ ಬಗ್ಗೆ ಸರ್ಕಾರವು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದೂ ಅವರು ಹೇಳಿದರು.

ರಾಜ್ಯಕ್ಕೆ ಅಧಿಕಾರವಿಲ್ಲ: ಕಾಂಗ್ರೆಸ್‌

ಏಕರೂಪ ನಾಗರಿಕ ಸಂಹಿತೆ ಜಾರಿಗಾಗಿ ಸಮಿತಿ ರೂಪಿಸುವ ಗುಜರಾತ್‌ ಸರ್ಕಾರದ ನಿರ್ಧಾರದಿಂದ ಜನರು ದಾರಿ ತಪ್ಪುವುದಿಲ್ಲ. ಇದು ಕೇವಲ ‘ಗಿಮಿಕ್‌’ ಅಷ್ಟೇ. ಇಂತಹ ಕಾನೂನು ರೂಪಿಸಲು ರಾಜ್ಯದ ಶಾಸಕಾಂಗಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಅರ್ಜುನ್‌ ಮೊಧ್ವಾಡಿಯಾ ಹೇಳಿದ್ದಾರೆ.

ಹಣದುಬ್ಬರ, ನಿರುದ್ಯೋಗ ಸಮಸ್ಯೆ ಮತ್ತು ಸರ್ಕಾರದ ವೈಫಲ್ಯಗಳನ್ನು ಮರೆಮಾಚಿ, ಜನರನ್ನು ದಾರಿ ತಪ್ಪಿಸಲು ಬಿಜೆಪಿಯು ಈ ನಿರ್ಧಾರ ಕೈಗೊಂಡಿದೆ ಎಂದೂ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.