ADVERTISEMENT

ಸಾಕ್ಷ್ಯ ತಿರುಚಿದ ಪ್ರಕರಣ: ಗುಜರಾತ್‌ ಮಾಜಿ ಡಿಜಿಪಿಗೆ ಜಾಮೀನು

ಪಿಟಿಐ
Published 5 ಆಗಸ್ಟ್ 2023, 23:30 IST
Last Updated 5 ಆಗಸ್ಟ್ 2023, 23:30 IST
   

ಅಹಮದಾಬಾದ್‌: 2002ರಲ್ಲಿ ನಡೆದ ಗೋಧ್ರೋತ್ತರ ಗಲಭೆಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ತಿರುಚಿದ ಪ್ರಕರಣದಲ್ಲಿ ಗುಜರಾತ್‌ನ ಮಾಜಿ ಡಿಜಿಪಿ ಆರ್‌.ಬಿ. ಶ್ರೀಕುಮಾರ್‌ ಅವರಿಗೆ ಗುಜರಾತ್‌ ಹೈಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಅವರಿಗೆ ಕೆಲವು ವಾರಗಳ ಹಿಂದೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿತ್ತು.

ಹೈಕೋರ್ಟ್‌ ನ್ಯಾಯಮೂರ್ತಿ ಇಲೇಶ್‌ ವೋರಾ ಅವರು ₹ 25 ಸಾವಿರದ ವೈಯಕ್ತಿಕ ಬಾಂಡ್‌ ಆಧಾರದ ಮೇಲೆ ಜಾಮೀನು ನೀಡಿದ್ದು, ಪ್ರಸ್ತುತ ಮಧ್ಯಂತರ ಜಾಮೀನಿನ ಮೇಲೆ ಹೊರಗಡೆ ಇರುವ ಶ್ರೀಕುಮಾರ್‌ ಅವರಿಗೆ ನಿರಾಳತೆ ದೊರೆತಂತಾಗಿದೆ. ತಮ್ಮ ಪಾಸ್‌ಪೋರ್ಟ್‌ ಅನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಶ್ರೀಕುಮಾರ್ ಅವರಿಗೆ ವೋರಾ ಸೂಚಿಸಿದ್ದಾರೆ.‌

ADVERTISEMENT

‘ತನಿಖಾ ಸಂಸ್ಥೆಯ ವಶದಲ್ಲಿರುವ ಸಾಕ್ಷ್ಯಗಳ ಆಧಾರದ ಮೇಲೆ ಈ ಪ್ರಕರಣ ನಿಂತಿದೆ ಎಂಬುದನ್ನು ನ್ಯಾಯಾಲಯ ಮನಗಂಡಿದೆ. ಅರ್ಜಿದಾರರಿಗೆ (ಶ್ರೀಕುಮಾರ್‌) 75 ವರ್ಷ ವಯಸ್ಸಾಗಿದ್ದು, ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಲ್ಲದೇ ತಮಗೆ ನೀಡಲಾದ ಮಧ್ಯಂತರ ಜಾಮೀನನ್ನು ಅರ್ಜಿದಾರರು ಯಾವುದೇ ರೀತಿಯಿಂದಲೂ ದುರುಪಯೋಗಪಡಿಸಿಕೊಂಡಿಲ್ಲ’ ಎಂದು ವೋರಾ ಅವರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

‘ಪ್ರಕರಣದ ಸಹ ಆರೋಪಿಗಳ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಈಗಾಗಲೇ ಪರಿಗಣಿಸಿದೆ. ಈಗ ಇಲ್ಲಿರುವ ಅರ್ಜಿದಾರರ ನಡುವಳಿಕೆಯನ್ನು ಪರಿಗಣಿಸಿ, ಅವರಿಗೆ ಜಾಮೀನು ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.