ADVERTISEMENT

ಗುಜರಾತ್: ಎರಡನೇ ಡೋಸ್ ಲಸಿಕೆ ಪಡೆದ ಬಳಿಕ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ದೃಢ

ಪಿಟಿಐ
Published 6 ಮಾರ್ಚ್ 2021, 16:51 IST
Last Updated 6 ಮಾರ್ಚ್ 2021, 16:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್: ಗುಜರಾತ್‌ನ ಆರೋಗ್ಯ ಅಧಿಕಾರಿಯೊಬ್ಬರಲ್ಲಿ ಎರಡನೇ ಡೋಸ್ ಲಸಿಕೆ ಪಡೆದ ಕೆಲವು ದಿನಗಳ ಬಳಿಕ ಕೋವಿಡ್–19 ಸೋಂಕು ದೃಢಪಟ್ಟಿದೆ.

ಗಾಂಧಿನಗರದ ದೆಹ್‌ಗಾಮ್‌ ತಾಲ್ಲೂಕಿನ ಆರೋಗ್ಯ ಅಧಿಕಾರಿಯು ಜನವರಿ 16ರಂದು ಮೊದಲ ಡೋಸ್ ಲಸಿಕೆ ಪಡೆದಿದ್ದರು. ಫೆಬ್ರುವರಿ 15ರಂದು ಎರಡನೇ ಡೋಸ್ ಪಡೆದಿದ್ದರು. ಇದಾಗಿ ಕೆಲವು ದಿನಗಳ ಬಳಿಕ ಅವರು ಜ್ವರದಿಂದ ಬಳಲುತ್ತಿದ್ದರು. ಅವರ ಮಾದರಿಗಳನ್ನು ಪಡೆದು ಪರೀಕ್ಷೆಗೆ ಒಳಪಡಿಸಿದಾಗ ಫೆಬ್ರುವರಿ 20ರಂದು ಕೋವಿಡ್ ದೃಢಪಟ್ಟಿತ್ತು ಎಂದು ಗಾಂಧಿನಗರದ ಮುಖ್ಯ ಆರೋಗ್ಯಾಧಿಕಾರಿ ಡಾ. ಎಂ.ಎಚ್.ಸೋಲಂಕಿ ತಿಳಿಸಿದ್ದಾರೆ.

‘ಸೋಂಕಿತ ಅಧಿಕಾರಿಯಲ್ಲಿ ಸೋಂಕಿನ ಲಕ್ಷಣಗಳು ಸೌಮ್ಯವಾಗಿದ್ದವು. ಹೀಗಾಗಿ ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿತ್ತು. ಸದ್ಯ ಅವರು ಗುಣಮುಖರಾಗಿದ್ದು, ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ’ ಎಂದೂ ಸೋಲಂಕಿ ಹೇಳಿದ್ದಾರೆ.

ಎರಡು ಡೋಸ್ ಲಸಿಕೆ ಪಡೆದ ಬಳಿಕ ದೇಹದಲ್ಲಿ ಕೊವಿಡ್ ವಿರುದ್ಧ ಪ್ರತಿಕಾಯಗಳು ಅಭಿವೃದ್ಧಿಯಾಗಲು ಸಾಮಾನ್ಯವಾಗಿ 45 ದಿನಗಳು ಬೇಕಾಗುತ್ತವೆ ಎಂದು ಅವರು ಹೇಳಿದ್ದಾರೆ.

ಸೋಂಕಿನಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಲಸಿಕೆ ಪಡೆದ ಬಳಿಕವೂ ಮಾಸ್ಕ್ ಧರಿಸಿ ಓಡಾಡುವುದು, ಅಂತರ ಕಾಯ್ದುಕೊಳ್ಳುವುದು ಅಗತ್ಯ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.