ADVERTISEMENT

ಶಾಹೀನ್ ಬಾಗ್: ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಸಂಕಟಕ್ಕೆ ಸಿಲುಕಿದ ಗುಂಜಾ ಕಪೂರ್

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 11:47 IST
Last Updated 5 ಫೆಬ್ರುವರಿ 2020, 11:47 IST
ಗುಂಜಾ ಕಪೂರ್ (ಎಡಚಿತ್ರ), ಶಾಹೀನ್ ಬಾಗ್‌ನಲ್ಲಿ ತಳ್ಳಾಟ
ಗುಂಜಾ ಕಪೂರ್ (ಎಡಚಿತ್ರ), ಶಾಹೀನ್ ಬಾಗ್‌ನಲ್ಲಿ ತಳ್ಳಾಟ   

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳ ಕುದಿಬಿಂದುವಾಗಿರುವ ಶಾಹೀನ್ ಬಾಗ್‌ನಲ್ಲಿ ಬುಧವಾರ ಬುರ್ಖಾಧಾರಿ ಮಹಿಳೆಯೊಬ್ಬರ ಬಗ್ಗೆ ಇತರ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ ಬೆಳವಣಿಗೆ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಆಕೆಯನ್ನು ರಕ್ಷಿಸಿ, ದೂರ ಕೊಂಡೊಯ್ದು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.

ಪ್ರತಿಭಟನಾನಿರತರ ಆಕ್ರೋಶಕ್ಕೆ ಗುರಿಯಾದಾಕೆಯನ್ನು ಗುಂಜಾ ಕಪೂರ್ ಎಂದು ಗುರುತಿಸಲಾಗಿದೆ. ಬುರ್ಖಾ ಧರಿಸಿ ಶಾಹೀನ್ ಬಾಗ್‌ಗೆ ಬಂದಿದ್ದ ಗುಂಜಾ, ತನ್ನ ಅಕ್ಕಪಕ್ಕದಲ್ಲಿದ್ದವರನ್ನು ನೂರೆಂಟು ಪ್ರಶ್ನೆ ಕೇಳಿದ್ದರು. ಇದರಿಂದ ಅನುಮಾನಗೊಂಡ ಕೆಲವರು ತಪಾಸಣೆ ಮಾಡಿದಾಗ ಆಕೆಯ ಬಳಿ ಕ್ಯಾಮೆರಾ ಇದ್ದುದು ಪತ್ತೆಯಾಗಿತ್ತು.

ಇದರಿಂದ ಆಕ್ರೋಶಗೊಂಡ ಹಲವು ಮಹಿಳೆಯರು ಗುಂಜಾ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಸಮಯ ನೂಕಾಟ–ತಳ್ಳಾಟ ನಡೆಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾನಿರತರನ್ನು ಸಮಾಧಾನಪಡಿಸಲು ಯತ್ನಿಸಿ,ಗುಂಜಾ ಅವರನ್ನು ದೂರ ಕರೆದೊಯ್ದರು.

ADVERTISEMENT

ಯುಟ್ಯೂಬ್ ಚಾನೆಲ್ ‘ರೈಟ್ ನೆರೇಟಿವ್‌’ನ ನಿರ್ವಾಹಕಿ ಎಂದು ತಮ್ಮನ್ನು ತಾವು ಕರೆದುಕೊಳ್ಳು ಗುಂಜಾ ಕಪೂರ್ ಅವರಟ್ವಿಟರ್‌ ಖಾತೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಸದ ತೇಜಸ್ವಿ ಸೂರ್ಯ ಫಾಲೊ ಮಾಡುತ್ತಿದ್ದಾರೆ.

‘ಪ್ರತಿಭಟನಾ ಸ್ಥಳಕ್ಕೆ ಕ್ಯಾಮೆರಾ ಏಕೆ ತಂದಿದ್ದಿರಿ?’ಎಂದು ಪ್ರಶ್ನಿಸಿದಾಗ, ‘ಇದು ಮಾಧ್ಯಮಗಳಿಗೆ ಬಿಸಿಬಿಸಿ ಸುದ್ದಿ ಸಿಗುವ ಕ್ಷಣವಲ್ಲ. ದೂರ ಹೋಗಿ’ಎಂದು ಪ್ರತಿಕ್ರಿಯಿಸಿದರು.

ಗುಂಜಾ ಕಪೂರ್ ಅವರನ್ನು ಮಹಿಳೆಯರು ಸುತ್ತುವರಿದಿರುವ ಮತ್ತು ಪೊಲೀಸರು ದೂರ ಕೊಂಡೊಯ್ಯುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.