ಜೈಪುರ: ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾನುವಾರ ರಾಜಸ್ಥಾನದಲ್ಲಿ ನಡೆದ ಮಹಾ ಪಂಚಾಯತ್‌ನಲ್ಲಿ ಭಾಗಿಯಾಗಿದ್ದ ಗುಜ್ಜರ್ ಸಮುದಾಯದ ಕೆಲವರು ಭರತ್‌ಪುರ ಜಿಲ್ಲೆಯಲ್ಲಿ ರೈಲ್ವೆ ಹಳಿ ಮೇಲೆ ಪ್ರತಿಭಟನೆ ನಡೆಸಿ ಪ್ರಯಾಣಿಕರ ರೈಲನ್ನು ತಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜ್ಜರ್ ಮೀಸಲಾತಿ ಸಂಘರ್ಷ ಸಮಿತಿ ಮುಖ್ಯಸ್ಥ ವಿಜಯ್ ಬೈಸ್ಲಾ ಸಭೆ ನಡೆಸಿ ರಾಜ್ಯ ಸರ್ಕಾರ ಸಮಿತಿಯ ಬೇಡಿಕೆಗಳಿಗೆ ನೀಡಿದ್ದ ಉತ್ತರದ ಪ್ರತಿಯನ್ನು ಓದಿದ್ದರು. ಗುಜ್ಜರ್ ಮೀಸಲು ಸಂಘರ್ಷ ಸಮಿತಿ ರಾಜ್ಯ ಸರ್ಕಾರಕ್ಕೆ ಭಾನುವಾರದವರೆಗೂ ಗಡುವು ನೀಡಿತ್ತು. ಪ್ರತಿಭಟನೆ ನಡೆಸದಂತೆ ಸಚಿವ ಜವಾಹರ್ ಸಿಂಗ್ ಬೇಡಮ್ ಗುಜ್ಜರ್ ಸಮುದಾಯಕ್ಕೆ ಮನವಿ ಮಾಡಿದ್ದರು.
ಮಹಾ ಪಂಚಾಯತ್ ಮುಗಿದ ನಂತರ ಸಮುದಾಯದ ಕೆಲವರು ಸರ್ಕಾರದ ಪ್ರತಿಕ್ರಿಯೆಗೆ ಅತೃಪ್ತಿ ವ್ಯಕ್ತಪಡಿಸಿ ಬಯಾನಾದಲ್ಲಿ ಮಥುರಾ–ಸವಾಯಿಮಾಧೋಪುರ್ ರೈಲನ್ನು ಒಂದೂವರೆ ಗಂಟೆಗಳ ಕಾಲ ತಡೆದಿದ್ದಾರೆ. ಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ವಿಜಯ್ ಬೈಸ್ಲಾ, ‘ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸಿ ಅತ್ಯಂತ ಹಿಂದುಳಿದ ವರ್ಗಗಳಿಗೆ ಶೇಕಡ 5ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿದ್ದೇವೆ. ಕೇಂದ್ರ ಸರ್ಕಾರಕ್ಕೆ ಇದನ್ನು ಶಿಫಾರಸು ಮಾಡಿ ಒತ್ತಡ ಹೇರಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇಡೀ ಸಮುದಾಯ ಸಂತೋಷವಾಗಿದೆ’ ಎಂದು ಹೇಳಿದರು.
2006ರಿಂದಲೂ ವಿಜಯ್ ಅವರ ತಂದೆ ಕಿರೋರಿ ಸಿಂಗ್ ಬೈಸ್ಲಾ ಗುಜ್ಜರ್ ಮೀಸಲಾತಿ ಹೋರಾಟ ಮುನ್ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.