ADVERTISEMENT

ಜ್ಞಾನವಾಪಿ: ನ್ಯಾಯಾಲಯದ ತೀರ್ಪು ನಿರಾಶದಾಯಕ- ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ಕೋಮುಸೌಹಾರ್ದಕ್ಕೆ ಧಕ್ಕೆ– ಎಐಎಂಪಿಎಲ್‌ಬಿ ಪ್ರತಿಕ್ರಿಯೆ

ಪಿಟಿಐ
Published 13 ಸೆಪ್ಟೆಂಬರ್ 2022, 11:09 IST
Last Updated 13 ಸೆಪ್ಟೆಂಬರ್ 2022, 11:09 IST
ಜ್ಞಾನವಾಪಿ ಮಸೀದಿ ಸಂಕೀರ್ಣ –ಪಿಟಿಐ ಚಿತ್ರ 
ಜ್ಞಾನವಾಪಿ ಮಸೀದಿ ಸಂಕೀರ್ಣ –ಪಿಟಿಐ ಚಿತ್ರ    

ನವದೆಹಲಿ: ಜ್ಞಾನವಾಪಿ ಮಸೀದಿ ಪ್ರಕರಣದ ನಿರ್ವಹಣೆಗೆ ಸಂಬಂಧಿಸಿದಂತೆ ವಾರಾಣಸಿ ಜಿಲ್ಲಾ ನ್ಯಾಯಾಲಯವು ನೀಡಿರುವ ತೀರ್ಪನ್ನು ನಿರಾಶದಾಯಕ ಎಂದು ಪ್ರತಿಕ್ರಿಯಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು (ಎಐಎಂಪಿಎಲ್‌ಬಿ), ಪೂಜಾ ಸ್ಥಳಗಳ ಕಾಯ್ದೆ 1991 ಅನ್ನು (ವಿಶೇಷ ನಿಬಂಧನೆಗಳು) ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.

ಜ್ಞಾನವಾಪಿ ಮಸೀದಿ ಆವರಣದಲ್ಲಿ ಇದೆ ಎಂದು ಹೇಳಲಾಗುವ ಶೃಂಗಾರ ಗೌರಿ ದೇಗುಲದಲ್ಲಿ ದಿನವೂ ಪೂಜೆ ಸಲ್ಲಿಸಲು ಅವಕಾಶ ಕೋರಿ ಸಲ್ಲಿಕೆಯಾಗಿರುವ ಅರ್ಜಿಯು ವಿಚಾರಣೆಗೆ ಅರ್ಹ ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯವುಸೋಮವಾರ ತೀರ್ಪು ಕೊಟ್ಟಿದೆ.

ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ತೀರ್ಪು ‘ನಿರಾಶದಾಯಕ ಹಾಗೂ ದುಃಖಕರ’ ಎಂದು ಎಐಎಂಪಿಎಲ್‌ಬಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘1991ರ ಮಧ್ಯಭಾಗದಲ್ಲಿ ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸಂಸತ್ತು, ಬಾಬರಿ ಮಸೀದಿ ಹೊರತುಪಡಿಸಿ, 1947ರಲ್ಲಿರುವಂತೆ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಯಥಾಸ್ಥಿತಿಯನ್ನು ಮುಂದುವರಿಸಲಾಗುವುದು ಎಂದು ಮಾನ್ಯ ಮಾಡಿತ್ತು. ಆದರೆ, ಇದರ ವಿರುದ್ಧದ ಯಾವುದೇ ವಿವಾದವು ಮಾನ್ಯವಾಗಿಲ್ಲ. ನಂತರ ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ 1991 ಅನ್ನು ಎತ್ತಿಹಿಡಿದಿದೆ ಮತ್ತು ಅದನ್ನು ಕಡ್ಡಾಯವಾಗಿ ಘೋಷಿಸಿತು’ ಎಂದೂ ಅವರು ಹೇಳಿದ್ದಾರೆ.

‘ವಾರಾಣಸಿ ಜಿಲ್ಲಾ ನ್ಯಾಯಾಲಯವು ಆರಂಭದಲ್ಲಿಯೇ ಹಿಂದೂ ಗುಂಪುಗಳ ಅರ್ಜಿಯನ್ನು ವಿಚಾರಣೆಗೆ ಅರ್ಹ ಎಂದು ಒಪ್ಪಿಕೊಂಡಿದೆ. ಇದು ದೇಶದ ಏಕತೆಯ ಮೇಲೆ ಪರಿಣಾಮ ಬೀರುತ್ತದೆ. ಕೋಮು ಸೌಹಾರ್ದಕ್ಕೂ ಧಕ್ಕೆ ತರುತ್ತದೆ’ಎಂದು ರಹಮಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಸರ್ಕಾರವು ಪೂಜಾಸ್ಥಳಗಳ ಕಾಯ್ದೆ 1991 ಅನ್ನು ಸಂ‍ಪೂರ್ಣವಾಗಿ ಜಾರಿಗೊಳಿಸಬೇಕು. ಎಲ್ಲಾ ಪಕ್ಷಗಳು ಈ ಕಾನೂನಿಗೆ ಬದ್ಧರಾಗಬೇಕು. ಅಲ್ಪಸಂಖ್ಯಾತರು ನ್ಯಾಯವ್ಯವಸ್ಥೆಯಿಂದ ಹತಾಶರಾಗುವ ಹಾಗೂ ನ್ಯಾಯದ ಎಲ್ಲಾ ಬಾಗಿಲುಗಳು ಮುಚ್ಚಿವೆ’ ಎಂದು ಭಾವಿಸುವ ಪರಿಸ್ಥಿತಿ ಉದ್ಭವಿಸಬಾರದು ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.