ADVERTISEMENT

ಸೇನಾ ಸಿಬ್ಬಂದಿಯ ಡೇಟಾ ಸೋರಿಕೆ ಮಾಡಿದ ಹ್ಯಾಕರ್‌ಗಳು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 18:51 IST
Last Updated 6 ಫೆಬ್ರುವರಿ 2021, 18:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರ್ತಿ ಏರ್‌ಟೈಲ್‌ ನೆಟ್‌ವರ್ಕ್‌ ಬಳಸುವ ಸೇನಾ ಸಿಬ್ಬಂದಿಯ ಡೇಟಾವನ್ನು ಹ್ಯಾಕರ್‌ಗಳು ಸೋರಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಆದರೆ, ಈ ಆರೋಪವನ್ನು ಕಂಪನಿಯು ಅಲ್ಲಗಳೆದಿದೆ.

ರೆಡ್‌ ರ‍್ಯಾಬಿಟ್‌ ಟೀಮ್‌ ಹೆಸರಿನ ಹ್ಯಾಕರ್‌ ಗುಂಪು, ಭಾರತದ ಕೆಲವು ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿದ್ದು, ಆ ವೆಬ್‌ಸೈಟ್‌ಗಳ ಪೋರ್ಟ್‌ಲ್‌ನಲ್ಲಿ ಸೇನಾ ಸಿಬ್ಬಂದಿಯ ಡೇಟಾ ಹರಿಯಬಿಟ್ಟಿದ್ದಾರೆ.

ಸೈಬರ್ ಭದ್ರತಾ ಸಂಶೋಧಕ ರಾಜ್‌ಶೇಖರ್ ರಾಜಹರಿಯಾ ಅವರ ಟ್ವೀಟ್‌ಗೆ ಕಮೆಂಟ್‌ನಲ್ಲಿ ಹ್ಯಾಕರ್‌ಗಳು ಈ ವೆಬ್ ಪುಟಗಳ ಕೆಲವು ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ಹಲವು ಮಾಧ್ಯಮ ಸಂಸ್ಥೆಗಳನ್ನೂ ಇದರೊಂದಿಗೆ ಟ್ಯಾಗ್ ಮಾಡಿದ್ದಾರೆ.

ADVERTISEMENT

‘ಭಾರ್ತಿ ಏರ್‌ಟೆಲ್‌ ಕಂಪನಿಯ ಸರ್ವರ್‌ನಲ್ಲಿ ಅಪ್‌ಲೋಡ್ ಮಾಡಲಾದ ಪ್ಯಾನ್‌ ಇಂಡಿಯಾ ಡೇಟಾದಲ್ಲಿ ಇನ್ನಷ್ಟು ಡೇಟಾವನ್ನು ಆದಷ್ಟು ಶೀಘ್ರದಲ್ಲೇ ಸೋರಿಕೆ ಮಾಡುತ್ತೇವೆ’ ಎಂದು ರೆಡ್‌ ರ‍್ಯಾಬಿಟ್‌ ಹ್ಯಾಕರ್‌ ಗುಂಪು ಪಿಟಿಐ ಸುದ್ದಿಸಂಸ್ಥೆಗೆ ಕಳುಹಿಸಿರುವ ಸಂದೇಶದಲ್ಲಿ ಹೇಳಿದೆ.

‘ಹ್ಯಾಕರ್‌ಗಳು ಪಾಕಿಸ್ತಾನದವರಿರಬಹುದು. ಏರ್‌ಟೆಲ್ ಡೇಟಾ ಅಪ್‌ಲೋಡ್ ಮಾಡಲು ಬಳಸಿರುವ ವೆಬ್‌ಸೈಟ್ ಅನ್ನು 2020ರ ಡಿಸೆಂಬರ್ 4ರಂದು ಮಿಸ್ಟರ್‌ ಕ್ಲೇ (ಟೀಮ್‌ಲೀಟ್ಸ್ - ಪಾಕಿಸ್ತಾನಿ ಹ್ಯಾಕರ್ ಗ್ರೂಪ್) ಹೆಸರಿನಲ್ಲಿ ಹ್ಯಾಕ್ ಮಾಡಿದ್ದಾರೆ. ಈ ಡೇಟಾ ಸೋರಿಕೆಯ ಹಿಂದೆ ಪಾಕಿಸ್ತಾನಿ ಹ್ಯಾಕರ್ ಗುಂಪು ಟೀಮ್‌ಲೀಟ್ಸ್ ಕೈವಾಡವಿರಬಹುದು’ ಎಂದು ರಾಜ್‌ಶೇಖರ್ ರಾಜಹರಿಯಾ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಭಾರತೀಯ ಸೇನೆ ಯಾವುದೇ ಉತ್ತರ ನೀಡಿಲ್ಲ. ಆದರೆ, ಸೇನೆಯ ಅಧಿಕಾರಿಯೊಬ್ಬರು ‘ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಇದು ಕೆಲವು ವಿರೋಧಿ ಶಕ್ತಿಗಳ ದುಷ್ಕೃತ್ಯವಿರಬಹುದು’ ಎಂದು ಹೇಳಿದ್ದಾರೆ.

ಭಾರ್ತಿ ಏರ್‌ಟೆಲ್ ವಕ್ತಾರರನ್ನು ಸಂಪರ್ಕಿಸಿದಾಗ ಈ ಆರೋಪ ಅಲ್ಲಗಳೆದು, ‘ಸರ್ವರ್‌ನಲ್ಲೂ ಅಂತಹ ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ. ಹ್ಯಾಕರ್‌ ಗುಂಪು ಹೇಳಿಕೊಂಡಿರುವಂತೆ ನಮ್ಮಲ್ಲಿನ ಯಾವುದೇ ಡೇಟಾ ಸೋರಿಕೆಯಾಗಿಲ್ಲ. ಏರ್‌ಟೆಲ್‌ನ ಪಾಲುದಾರರಿಗೆ ಕೆಲವು ಡೆಟಾಗಳನ್ನು ನಿಯಮಾನುಸಾರ ಪಡೆದುಕೊಳ್ಳಲು ಅವಕಾಶವಿದೆ. ಇದರಲ್ಲಿ ಎಲ್ಲಿಯಾದರೂ ಲೋಪವಾಗಿದ್ದರೆ ತನಿಖೆ ನಡೆಸಿ ಸೂಕ್ತ ಕ್ರಮ ವಹಿಸಲು ಸಂಬಂಧಿಸಿದವರಿಗೆ ಸೂಚಿಸಿದ್ದೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.