ADVERTISEMENT

ವಾಜೆ ಸಂಕಷ್ಟ ತರುತ್ತಾರೆಂದು ಮುಖಂಡರಿಗೆ ಮೊದಲೇ ಎಚ್ಚರಿಸಿದ್ದೆ: ಸಂಜಯ್‌ ರಾವುತ್

ಪಿಟಿಐ
Published 29 ಮಾರ್ಚ್ 2021, 11:05 IST
Last Updated 29 ಮಾರ್ಚ್ 2021, 11:05 IST
ಸಂಜಯ್‌ ರಾವುತ್
ಸಂಜಯ್‌ ರಾವುತ್   

ಮುಂಬೈ: ‘ಸದ್ಯ ಅಮಾನತುಗೊಂಡಿರುವ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಮಹಾರಾಷ್ಟ್ರ ಸರ್ಕಾರಕ್ಕೆ ಸಂಕಷ್ಟ ತರಬಹುದು ಎಂದು ಮೊದಲೇ ಎಚ್ಚರಿಸಿದ್ದೆ’ ಎಂದು ಶಿವಸೇನಾ ಸಂಸದ ಸಂಜಯ ರಾವುತ್‌ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಚಿನ್ ವಾಜೆ ಪ್ರಕರಣವು ರಾಜ್ಯದ ಮಹಾವಿಕಾಸ ಆಘಾಡಿ ಮೈತ್ರಿ ಸರ್ಕಾರಕ್ಕೆ ಕೆಲವೊಂದು ಪಾಠವನ್ನು ಕಲಿಸಿದೆ ಎಂದು ಹೇಳಿದ್ದಾರೆ.

ಉದ್ಯಮಿ ಮುಖೇಶ್‌ ಅಂಬಾನಿ ಅವರ ನಿವಾಸದ ಬಳಿ ಪತ್ತೆಯಾಗಿದ್ದ ಸ್ಫೋಟಕವಿದ್ದ ವಾಹನ ಪ್ರಕರಣ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ವಾಜೆ ಅವರನ್ನು ತಿಂಗಳಾರಂಭದಲ್ಲಿ ಬಂಧಿಸಿದ್ದರು.

ADVERTISEMENT

ವಾಜೆ ಈ ಹಿಂದೆಯೂ 2004ರಲ್ಲಿ ಲಾಕಪ್‌ ಡೆತ್‌ ಪ್ರಕರಣದ ಸಂಬಂಧ ಅಮಾನತುಗೊಂಡಿದ್ದರು. ‘ಅವರನ್ನು ಸೇವೆಗೆ ಮರುಸೇರ್ಪಡೆಗೊಳಿಸುವಾಗ ಕೆಲ ಮುಖಂಡರಿಗೆ ವಾಜೆ ವರ್ತನೆ ಕುರಿತು ಎಚ್ಚರಿಕೆ ನೀಡಿದ್ದೆ. ಅವರ ಕಾರ್ಯಶೈಲಿ ಸರ್ಕಾರಕ್ಕೆ ತೊಡಕುಂಟು ಮಾಡಬಹುದು ಎಂದು ತಿಳಿಸಿದ್ದೆ‘ ಎಂದು ರಾವುತ್‌ ಹೇಳಿದರು.

ಯಾವ ಮುಖಂಡರಿಗೆ ಈ ಎಚ್ಚರಿಕೆಯ ಸೂಚನೆ ನೀಡಿದ್ದೆ ಎಂದು ಹೆಸರು ಹೇಳಲಾಗದು. ಆದರೆ, ಆ ಮುಖಂಡರಿಗೆ ಈ ಕುರಿತು ಅರಿವು ಇದೆ. ನಾನು ದಶಕಗಳ ಕಾಲ ಪತ್ರಕರ್ತನಾಗಿದ್ದೆ. ನನಗೆ ವಾಜೆ ಚೆನ್ನಾಗಿ ಗೊತ್ತಿದ್ದಾರೆ. ಆತ ಕೆಟ್ಟ ವ್ಯಕ್ತಿಯಲ್ಲ. ಕೆಲವು ಸಂದರ್ಭಗಳು ಆತನನ್ನು ಕೆಟ್ಟವನನ್ನಾಗಿಸಿವೆ ಎಂದು ತಿಳಿಸಿದರು.

ವಾಜೆ ಅವರನ್ನು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೂ ಮೊದಲು ಬೆಂಬಲಿಸಿದ್ದರು. ಆದರೆ, ಅವರ ಚಟುವಟಿಕೆ ಈಗ ಬಹಿರಂಗ ಆಗಿದೆ. ಇನ್ನು ಅವರನ್ನು ಬೆಂಬಲಿಸಲು ಕಾರಣಗಳಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.