ADVERTISEMENT

‘ಭಾರತದಲ್ಲಿ ಮಾನವ ಹಕ್ಕುಗಳ ಸ್ಥಿತಿ ಚಿಂತಾಜನಕ’

ಶೆಮಿಜ್‌ ಜಾಯ್‌
Published 1 ಜುಲೈ 2018, 15:58 IST
Last Updated 1 ಜುಲೈ 2018, 15:58 IST
ಹರ್ಷ ಮಂದರ್‌
ಹರ್ಷ ಮಂದರ್‌   

ಪ್ರಜಾವಾಣಿ ಸಂದರ್ಶನ

ಜನಪರ ಕಾಳಜಿಯ ಡಾ. ಹರ್ಷ ಮಂದರ್‌ ಅಪರೂಪದ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತ. ಮಾನವ ಹಕ್ಕುಗಳ ರಕ್ಷಣೆ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ಹೆಸರು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ವಿಶೇಷ ವೀಕ್ಷಕ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ‘ರಚನಾತ್ಮಕ ಕೆಲಸಕ್ಕೆ ಅವಕಾಶ ಇಲ್ಲ ಎನ್ನುವುದು ಮನವರಿಕೆಯಾಗಿದ್ದರಿಂದ ಅಲ್ಲಿಂದ ಹೊರಬಂದಿದ್ದೇನೆ’ ಎಂದಿದ್ದಾರೆ.

ADVERTISEMENT

ಉತ್ತರ ಪ್ರದೇಶದಲ್ಲಿ ನಡೆದ ಹಲವು ಎನ್‌ಕೌಂಟರ್‌ ಹತ್ಯೆಗಳ ಬಗ್ಗೆ ಪ್ರಶ್ನೆ ಎತ್ತಿದ್ದ ಅವರು ಜೇನುಗೂಡಿಗೆ ಕೈಹಾಕಿದ್ದರು. ಅಸ್ಸಾಂ ನಿರಾಶ್ರಿತರ ಶಿಬಿರಗಳಲ್ಲಿ ವಿದೇಶಿ ವಲಸಿಗರನ್ನು ಅಕ್ರಮವಾಗಿ ಕೂಡಿ ಹಾಕಿದ ಕುರಿತು ಆಯೋಗಕ್ಕೆ ವರದಿ ಸಲ್ಲಿಸಿದ್ದರು. ಅದರಿಂದ ಪ್ರಯೋಜನವಾಗಲಿಲ್ಲ ಎನ್ನುವುದು ಮಂದರ್‌ ಅಸಮಾಧಾನಕ್ಕೆ ಪ್ರಮುಖ ಕಾರಣ.

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ನಿಷ್ಕ್ರಿಯಗೊಂಡ ಸಂಸ್ಥೆಗಳಲ್ಲಿ ಮಾನವ ಹಕ್ಕುಗಳ ಆಯೋಗ ಕೂಡ ಒಂದು ಎನ್ನುವುದು ಅವರ ಆರೋಪ. ಈ ಬಗ್ಗೆ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

* ಎನ್‌ಎಚ್‌ಆರ್‌ಸಿ ವಿಶೇಷ ವೀಕ್ಷಕ ಹುದ್ದೆಗೆ ರಾಜೀನಾಮೆ ನೀಡಲು ಕಾರಣ?

ಮಂದರ್‌: ವಿಶೇಷ ವೀಕ್ಷಕ ಹುದ್ದೆ ವಹಿಸಿಕೊಳ್ಳುವಂತೆ ಆಯೋಗವೇ ಆಹ್ವಾನ ನೀಡಿತ್ತು. ಗೋರಕ್ಷಣೆಯ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ಹಲ್ಲೆ, ಹತ್ಯೆ ಮತ್ತು ಇನ್ನಿತರ ಸಮಸ್ಯೆ ಗಮನದಲ್ಲಿಟ್ಟುಕೊಂಡು ಆಹ್ವಾನ ಒಪ್ಪಿಕೊಂಡಿದ್ದೆ.

ಉತ್ತರ ಪ್ರದೇಶ ಮತ್ತು ಹರಿಯಾಣದ ಮೆವಾತ್‌ನಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ ಎನ್‌ಕೌಂಟರ್‌ಗಳ ಬಗ್ಗೆ ಪ್ರಸ್ತಾಪಿಸಿದೆ. ಅಸ್ಸಾಂ ಶಿಬಿರಗಳ ವಸ್ತುಸ್ಥಿತಿ ಅಧ್ಯಯನಕ್ಕೆ ಸಮ್ಮತಿ ನೀಡಿದ್ದ ಆಯೋಗ, ಎನ್‌ಕೌಂಟರ್‌ ಬಗ್ಗೆ ಚಕಾರ ಎತ್ತಲಿಲ್ಲ.

ಅಸ್ಸಾಂ ನಿರಾಶ್ರಿತರ ಶಿಬಿರಗಳ ವಸ್ತುಸ್ಥಿತಿ ಕಂಡು ದಂಗಾಗಿ ಹೋದೆ. ಆಯೋಗಕ್ಕೆ ವಸ್ತುನಿಷ್ಠ ವರದಿ ಸಲ್ಲಿಸಿದ್ದೆ. ಆದರೆ, ಆಯೋಗದಿಂದ ಇದುವರೆಗೂ ಪ್ರತಿಕ್ರಿಯೆ ಇಲ್ಲ. ದೂಳು ಹಿಡಿದ ವರದಿಯನ್ನು ಬಹಿರಂಗಗೊಳಿಸಲು ನಿರ್ಧರಿಸಿದೆ. ರಾಜೀನಾಮೆ ಬಿಟ್ಟು ಬೇರೆ ಆಯ್ಕೆ ಇರಲಿಲ್ಲ.

* ವರದಿಯನ್ನು ಆಯೋಗ ಏಕೆ ಗಂಭೀರವಾಗಿ ಪರಿಗಣಿಸಲಿಲ್ಲ. ಸರ್ಕಾರದ ಒತ್ತಡವಿತ್ತೇ?

ಮಂದರ್‌: ವರದಿಯ ಆಧಾರದ ಮೇಲೆ ಎನ್‌ಎಚ್‌ಆರ್‌ಸಿ ಕ್ರಮ ಜರುಗಿಸಿದ್ದರೆ ಅದು ‘ಸರ್ಕಾರದ ವಿರೋಧಿ’ ಎಂಬ ಹಣೆಪಟ್ಟಿ ಅಂಟಿಸಿಕೊಳ್ಳುತ್ತಿತ್ತು.

ಗುಜರಾತ್‌ ನರಮೇಧ ಸಂದರ್ಭದಲ್ಲಿ ಎನ್‌ಎಚ್‌ಆರ್‌ಸಿ ಮುಖ್ಯಸ್ಥರಾಗಿದ್ದ ನ್ಯಾಯಮೂರ್ತಿ ಜೆ.ಎಸ್‌. ವರ್ಮಾ, ಆಯೋಗದ ನಿಜವಾದ ಶಕ್ತಿಯನ್ನು ಸಾಬೀತುಪಡಿಸಿದ್ದರು. ‌ಎನ್‌ಎಚ್‌ಆರ್‌ಸಿ ವರದಿ ಆಧರಿಸಿ ಸುಪ್ರೀಂ ಕೋರ್ಟ್‌, ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿತ್ತು. ಅದು ಆಯೋಗದ ನಿಜವಾದ ಶಕ್ತಿ.

* ಅಸ್ಸಾಂನಲ್ಲಿ ಪರಿಸ್ಥಿತಿ ಹೇಗೆ ಅತ್ಯಂತ ಗಂಭೀರವಾಗಿದೆ?

ಮಂದರ್‌: ಒಂದು ದೇಶ, ಜನಸಮೂಹವೊಂದನ್ನು ವಿದೇಶಿ ಅಕ್ರಮ ವಲಸಿಗರು ಎಂದು ಹೊರದಬ್ಬಿದರೆ, ಮತ್ತೊಂದೆಡೆ ಅವರ ತಾಯ್ನಾಡು ಆ ಜನರನ್ನು ತಮ್ಮವರೆಂದು ಒಪ್ಪಿಕೊಳ್ಳುತ್ತಿಲ್ಲ. ಹಾಗಾದರೆ ಅವರ ಗತಿ ಏನು?

ವಲಸಿಗರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಸಂವಿಧಾನ ಮತ್ತು ಅಂತರರಾಷ್ಟ್ರೀಯ ಕಾನೂನಿನಲ್ಲಿ ಸ್ಪಷ್ಟವಾದ ಮಾರ್ಗಸೂಚಿಗಳಿವೆ. ಅಸ್ಸಾಂನಲ್ಲಿ ಮಾರ್ಗಸೂಚಿಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ವರದಿ ಪ್ರಕಟವಾದ ನಂತರ ಎಷ್ಟು ಜನರನ್ನು ವಿದೇಶಿಯರು ಎಂದು ಘೋಷಿಸಲಾಗುತ್ತದೆಯೋ ಗೊತ್ತಿಲ್ಲ.

* ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಬಗ್ಗೆ ವಲಸಿಗರಲ್ಲಿ ಭೀತಿ ಇದೆಯೇ?

ಮಂದರ್‌: ಹೌದು! ಅಸ್ಸಾಂನಲ್ಲಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸುವ ಸರ್ಕಾರದ ‘ಕಾನೂನುಬದ್ಧ ನಾಗರಿಕರ ಪಟ್ಟಿ’ ವಲಸಿಗರಲ್ಲಿ ಭೀತಿ ಹುಟ್ಟು ಹಾಕಿದೆ.

ಮುಸ್ಲಿಮರು ಮತ್ತು ಬಂಗಾಳಿ ಭಾಷಿಕ ಹಿಂದೂಗಳಲ್ಲಿ ಎನ್‌ಆರ್‌ಸಿ ಬಗ್ಗೆ ಆತಂಕವಿದೆ. ವಲಸಿಗರು ಇಲ್ಲಿಯೇ ಮದುವೆಯಾಗಿ ಮಕ್ಕಳನ್ನು ಪಡೆದಿದ್ದಾರೆ. ಹಾಗಾದರೆ ಆ ಮಕ್ಕಳ ಭವಿಷ್ಯದ ಗತಿ ಏನು?

* ರಾಷ್ಟ್ರೀಯ ನಾಗರಿಕ ನೋಂದಣಿ ಬಗ್ಗೆ ಸರ್ಕಾರ ಆತುರದ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಅನಿಸುತ್ತಿದೆಯೇ?

ಮಂದರ್‌: ಸರ್ಕಾರದ ಈ ‘ನಾಗರಿಕರ ಪಟ್ಟಿ’ ಲಕ್ಷಾಂತರ ಅಸ್ಸಾಂ ನಿವಾಸಿಗಳನ್ನು ವಿದೇಶಿ ಅಕ್ರಮ ವಲಸಿಗರು ಎಂದು ಘೋಷಿಸುವ ಸಾಧ್ಯತೆ ಇದೆ. ಲಕ್ಷಾಂತರ ಜನರ ಬದುಕು ಅತಂತ್ರವಾಗಲಿದೆ. ಇದು ಮಾನವ ಹಕ್ಕುಗಳಿಗೆ ಎದುರಾದ ಗಂಭೀರ ಸಮಸ್ಯೆ.

* ಸರ್ಕಾರದ ಈ ಕ್ರಮ ಅಸ್ಸಾಂ ರಾಜ್ಯವನ್ನು ವಿಭಜಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ...

ಮಂದರ್‌: ರೋಹಿಂಗ್ಯಾ ಸಮುದಾಯದ ಸಮಸ್ಯೆ ಅಥವಾ ಅದಕ್ಕಿಂತ ಕೆಟ್ಟ ಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡುತ್ತಿದೆ. ಅದನ್ನು ನಾವು ತಡೆಯಬೇಕಾಗಿದೆ.

* ಬಿಜೆಪಿ ರಾಷ್ಟ್ರೀಯ ನಾಗರಿಕ ನೋಂದಣಿ ಮುಂದಿಟ್ಟುಕೊಂಡು ಮತಬ್ಯಾಂಕ್‌ ರಾಜಕೀಯ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ...

* ಆ ಬಗ್ಗೆ ಸಂಶಯ ಬೇಡ. ಬಂಗಾಳಿ ಹಿಂದೂಗಳನ್ನು ಉಳಿಸಿಕೊಂಡು, ಬಂಗಾಳಿ ಮುಸ್ಲಿಮರನ್ನು ಹೊರದಬ್ಬುವುದಾಗಿ ಸರ್ಕಾರ ಹೇಳುತ್ತಿದೆ. ಎನ್‌ಆರ್‌ಸಿ ಒಂದು ಕೋಮುವಾದಿ ಕಾರ್ಯಸೂಚಿ.

* ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಎನ್‌ಕೌಂಟರ್‌ ನಡೆಸಲಾಗುತ್ತಿದೆಯೇ? ಎನ್‌ಕೌಂಟರ್‌ಗಳನ್ನು ಕೋಮುವಾದದ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆಯೇ?

ಮಂದರ್‌: ಹಿಂದಿನ ಸರ್ಕಾರದ ಆಡಳಿತ ಅವಧಿಯಲ್ಲೂ ಎನ್‌ಕೌಂಟರ್‌ ನಡೆದಿವೆ. ಅವು ಕೂಡ ಮಾನವ ಹಕ್ಕುಗಳ ಉಲ್ಲಂಘನೆ. ಈಗ ನಡೆಯುತ್ತಿರುವ ಎನ್‌ಕೌಂಟರ್‌ಗಳು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿವೆ. ಇದು ಅಪಾಯಕಾರಿ ಬೆಳವಣಿಗೆ.

ಯೋಗಿ ಆದಿತ್ಯನಾಥ ಉತ್ತರ ಪ್ರದೇಶದಲ್ಲಿ ಅಧಿಕಾರ ವಹಿಸಿಕೊಂಡ 8–12 ಗಂಟೆಗಳ ಒಳಗಾಗಿ ಮೇವಾತ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮುಸ್ಲಿಮರನ್ನು ಹತ್ಯೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.