ADVERTISEMENT

ಪುರಾತನ ಡಿಎನ್‌ಎ ವಿಶ್ಲೇಷಣೆ ಪ್ರಯತ್ನ

ಮದುರೈನ ಕಾಮರಾಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 19:30 IST
Last Updated 16 ಫೆಬ್ರುವರಿ 2023, 19:30 IST
   

ಚೆನ್ನೈ: ತಮಿಳುನಾಡಿನ ಮದುರೈನ ಕಾಮರಾಜ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಪ್ರಯೋಗಾಲಯದಲ್ಲಿ ಪುರಾತನ ಕಾಲದ ಡಿಎನ್‌ಎ ವಿಶ್ಲೇಷಣೆ ನಡೆಸಲು ಅಮೆರಿಕದ ಪ್ರತಿಷ್ಠಿತ ಡೇವಿಡ್‌ ರೀಚ್ ಪ್ರಯೋಗಾಲಯದ ವಿಜ್ಞಾನಿಗಳು ಕೈಜೋಡಿಸಿದ್ದಾರೆ. ಉತ್ಖನನದ ವೇಳೆ ಹೊರತೆಗೆಯಲಾಗಿರುವ ಪುರಾತನ ಕಾಲದ ಮನುಷ್ಯನ 30ಕ್ಕೂ ಹೆಚ್ಚಿನ ಮಾದರಿಗಳ ಡಿಎನ್‌ಎಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಈ ಮಾದರಿಗಳಿಗೆ ವೈಜ್ಞಾನಿಕ ಪುರಾವೆಗಳನ್ನು ಒದಗಿಸಲು ಈ ಅಧ್ಯಯನ ನೆರವಾಗಲಿದೆ.

ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಡೇವಿಡ್ ರೀಚ್ ಪ್ರಯೋಗಾಲಯದ ಹಿರಿಯ ವಿಜ್ಞಾನಿ ಕೆಂಡರ್ ಸಿರಕ್ ಅವರ ನೇತೃತ್ವದ ತಂಡ ಸೋಮವಾರ ಮದುರೈಗೆ ಬಂದಿದೆ. ಕೊಂತಾವೈ, ಸಿವಗಾಲೈ, ಆದಿಚನ್ನಲ್ಲೂರು, ಮಯಿಲಾದಂಆರೈ, ಕೊದುಮನಾಲ್‌ನಲ್ಲಿ ಸಂಗ್ರಹಿಸಲಾಗಿರುವ ಮಾದರಿಗಳ ವಿಶ್ಲೇಷಣೆಗೆ ಈ ತಂಡ ನೆರವು ನೀಡಲಿದೆ.

ಕ್ರಿ.ಪೂ. 800ರಿಂದ ಕ್ರಿ.ಶ. 300ರ ಅವಧಿಯಲ್ಲಿ ಇತ್ತು ಎಂದು ನಂಬಲಾದ, ಜನವಸತಿ ನಗರ ಕೀಲಾದಿಯ ಕೊಂತಾವೈ ಎಂಬಲ್ಲಿ ಕಂಡುಬಂದಿದ್ದ ಸಮಾಧಿ ಸ್ಥಳದಲ್ಲಿ 2014–16ರ ಅವಧಿಯಲ್ಲಿ ಉತ್ಖನನ ನಡೆಸಲಾಗಿತ್ತು. ಈ ಕುರಿತು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ವರದಿ ಸಲ್ಲಿಸಿತ್ತು. ಪುರಾತತ್ವ ಇಲಾಖೆಯ ಪ್ರಕಾರ, ಸಂಗಂ ವಂಶದ ಇತಿಹಾಸವು ಅಂದುಕೊಂಡಿದ್ದಕ್ಕಿಂತ 500 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ.

ADVERTISEMENT

2022ರ ನವೆಂಬರ್‌ನಲ್ಲಿ ಪ್ರಯೋಗಾಲಯವನ್ನು ಉದ್ಘಾಟಿಸಲಾಗಿತ್ತು. ತಮಿಳುನಾಡಿನ ಪುರಾತತ್ವ ಇಲಾಖೆ ಹಾಗೂ ಭಾರತೀಯ ಪುರಾತತ್ವ ಇಲಾಖೆಗಳು ಈ ಸ್ಥಳಗಳಲ್ಲಿ ಉತ್ಖನನ ನಡೆಸಿ ಸಂಗ್ರಹಿಸಿದ್ದ ಮಾನವ, ಪ್ರಾಣಿಗLu ಹಾಗೂ ಸಸ್ಯಗಳ ಮಾದರಿಗಳ ಡಿಎನ್‌ಎ ವಿಶ್ಲೇಷಣೆಯ ಪ್ರಾಥಮಿಕ ಕೆಲಸಗಳು ಅಂದಿನಿಂದಲೇ ಆರಂಭವಾಗಿದ್ದವು.

‘ನಾವು ಈಗಾಗಲೇ ಕೆಲಸ ಆರಂಭಿಸಿದ್ದೇವೆ. ಶತಮಾನಗಳಷ್ಟು ಹಿಂದೆಯೇ ಭೂಮಿಯಲ್ಲಿ ಹೂತುಹೋಗಿದ್ದರಿಂದ ಈ ಮಾದರಿಗಳು ಸಾಕಷ್ಟು ಹಾನಿಗೊಂಡಿವೆ. ಹಾರ್ವರ್ಡ್ ತಂಡದ ನೆರವಿನಿಂದ ಈ ಮಾದರಿಗಳಿಂದ ಡಿಎನ್‌ಎ ಹೊರತೆಗೆಯಲು ಮುಂದಾಗಿದ್ದೇವೆ. ಹಾರ್ವರ್ಡ್ ತಂಡವು ತಂತ್ರಗಳನ್ನು ನಮ್ಮ ಜೊತೆ ಹಂಚಿಕೊಳ್ಳಲಿದೆ’ ಎಂದು ಮದುರೈ ಕಾಮರಾಜ್ ವಿಶ್ವವಿದ್ಯಾಲಯದ ತಳಿಶಾಸ್ತ್ರ ಮತ್ತು ಜೈವಿಕ ವಿಜ್ಞಾನ ವಿಭಾಗದ ಮುಖ್ಯಸ್ಥ ಜಿ.ಕುಮರೇಶನ್ ಅವರು ಹೇಳಿದ್ದಾರೆ.

ವಿಜ್ಞಾನಿ ಕೆಂಡರ್ ಸಿರಕ್ ಅವರು 500ಕ್ಕೂ ಹೆಚ್ಚು ಡಿಎನ್‌ಎ ಮಾದರಿಗಳನ್ನು ವಿಶ್ಲೇಷಿಸಿದ ಅನುಭವಿ. ತಲೆಬುರುಡೆ ಮಾದರಿಗಳಿಗೆ ಹೆಚ್ಚಿನ ಹಾನಿ ಮಾಡದೆ, ಅದರಿಂದ ಡಿಎನ್‌ಎ ಮಾದರಿಗಳನ್ನು ಹೊರತೆಗೆಯುವಲ್ಲಿ ನಿಷ್ಣಾತರು. ಈ ಕ್ಷೇತ್ರದಲ್ಲಿ ಅವರ ಅನುಭವ ಮದುರೈ ಪ್ರಯೋಗಲಾಯದ ಸಿಬ್ಬಂದಿಗೆ ಬಹಳ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

ಮುಖ್ಯವಾಗಿ, ಮಾನವನ ತಲೆಬುರುಡೆಯ ಗಟ್ಟಿಮೂಳೆ ಹಾಗೂ ಹಲ್ಲಿನ ಮಾದರಿಗಳಿಂದ ಡಿಎನ್‌ಎ ಮಾದರಿಗಳನ್ನು ಹೊರತೆಗೆಯಲಾಗುತ್ತದೆ. ಹೊರತೆಗೆಯಲಾದ ಭಾಗವನ್ನು ಸಂಸ್ಕರಿಸಿ, ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ. ಪುರಾತನ ಡಿಎನ್‌ಎ ಮಾದರಿಗಳನ್ನು ಜಾಗತಿಕ ದತ್ತಾಂಶಗಳ ಜೊತೆ ಹೋಲಿಸಲಾಗುತ್ತದೆ. ಜನರ ವಲಸೆ ಹಾಗೂ ವಿಶ್ವದ ಜನರ ಜೊತೆಗೆ ಇದ್ದಿರಬಹುದಾದ ನಂಟಿನ ಮೇಲೆ ಈ ವಿಶ್ಲೇಷಣೆಗಳು ಬೆಳಕು ಚೆಲ್ಲಲಿವೆ ಎಂದು ಕುಮರೇಶನ್ ಅವರು ಹೇಳಿದ್ದಾರೆ.

‘ಎಷ್ಟೋ ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ವಾಸವಿದ್ದ ಜನರ ಡಿಎನ್‌ಎ ಅಧ್ಯಯನ ನಡೆಸಲು ಮದುರೈ ವಿಶ್ವವಿದ್ಯಾಲಯದ ಜೊತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ’ ಎಂದು ಸಿರಕ್ ಅವರು ಹೇಳಿದ್ದಾರೆ.

ಮದುರೈ ಪ್ರಯೋಗಾಲಯದ ವಿಜ್ಞಾನಿಗಳು ನಡೆಸುವ ಡಿಎನ್‌ಎ ವಿಶ್ಲೇಷಣೆಯ ಫಲಿತಾಂಶದ ನಿಖರತೆಯನ್ನು ಹಾರ್ವರ್ಡ್ ವಿಜ್ಞಾನಿಗಳ ತಂಡ ಪರಿಶೀಲನೆ ನಡೆಸಲಿದೆ. ಇಲ್ಲಿನ ಫಲಿತಾಂಶವನ್ನು ಜಗತ್ತಿನ ಪುರಾತನ ಹಾಗೂ ಆಧುನಿಕವಾದ ಮಾನವನ ಸಾವಿರಾರು ಜೆನೋಮ್‌ಗಳ ಜೊತೆ ತುಲನೆ ಮಾಡಲಾಗುತ್ತದೆ. ಮಾನವನ ವಲಸೆ ಪ್ರವೃತ್ತಿಯನ್ನು ವಿವರಿಸಲು ಇದರಿಂದ ನೆರವಾಗುತ್ತದೆ. ಸಂಗಮ್ ಸಾಹಿತ್ಯದಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ದೃಢೀಕರಿಸಲು ಯತ್ನಿಸಬಹುದು ಎಂದು ಸಿರಕ್ ಅವರು ಹೇಳಿದ್ದಾರೆ.

ಕೃಷಿ, ಸಂಸ್ಕೃತಿ ಮೇಲೆ ಬೆಳಕು ಚೆಲ್ಲುವ ಸಾಧ್ಯತೆ

ಡಿಎನ್‌ಎ ಅಧ್ಯಯನದ ಜೊತೆಗೆ, ಅಸ್ಥಿಪಂಜರದ ಅಳಿದುಳಿದ ಭಾಗಗಳ ಪ್ರೊಟೀನ್‌ಗಳ ಬಗ್ಗೆಯೂ ಮದುರೈ ಪ್ರಯೋಗಾಲಯದ ತಂಡ ಅಧ್ಯಯನ ನಡೆಸಿದೆ. ಅಲ್ಲದೆ, ಪೂಜೆಗಳಿಗೆ ಬಳಸಲಾಗುವ ಮಡಕೆಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಮಾನವ, ಪ್ರಾಣಿ, ಸಸ್ಯಗಳ ಸುಮಾರು 20 ಮಾದರಿಗಳಿಂದ 150 ಕೋಟಿ ಡಿಎನ್‌ಎ ತುಣುಕುಗಳನ್ನು ಪ್ರಯೋಗಾಲಯದಲ್ಲಿ ವರ್ಗೀಕರಣ ಮಾಡಲಾಗಿದೆ. ಕೃಷಿ ಪದ್ಧತಿ, ವ್ಯಾಪಾರ ವೃತ್ತಿ ಮೊದಲಾದವನ್ನು ಅರಿಯಲು ಡಿಎನ್‌ಎ ಮಾದರಿಗಳು ನೆರವಾಗಲಿವೆ. ಕ್ರಿ.ಪೂ. 500ರಿಂದ ಕ್ರಿ.ಪೂ.2500ರ ನಡುವಿನ ಅವಧಿಯಲ್ಲಿ ತಮಿಳುನಾಡಿನಲ್ಲಿ ಅನುಸರಿಸುತ್ತಿದ್ದ ಕೃಷಿ, ಸಂಸ್ಕೃತಿ, ಸಾಮಾಜಿಕ ಅಂಶಗಳನ್ನು ಅರ್ಥಮಾಡಿಕೊಳ್ಳಲು ಜೈವಿಕ ಅಣುಗಳ ವಿಶ್ಲೇಷಣೆ ನೆರವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.