ಚಂಡೀಗಢ: ಬ್ಯಾಂಕ್‌ಗಳಿಂದ ಪಡೆದ ಸಾಲ ತೀರಿಸಲಾಗದೆ ಮನನೊಂದು, ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಪಂಚಕುಲಾದಲ್ಲಿ ನಡೆದಿದೆ.
ಪಂಚಕುಲಾ ಸಮೀಪದ ಸಕೇತಡಿ ನಿವಾಸಿ ಪ್ರವೀಣ್ ಮಿತ್ತಲ್ (41), ಅವರ ಪತ್ನಿ, ಪೋಷಕರು ಹಾಗೂ ಮೂವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡವರು. ಮಕ್ಕಳ ಪೈಕಿ ಇಬ್ಬರು ಅವಳಿ ಹೆಣ್ಣುಮಕ್ಕಳು ಎಂದು ತಿಳಿದುಬಂದಿದೆ.
ಸೋಮವಾರ ತಡರಾತ್ರಿ ಪಂಚಕುಲಾ ಸೆಕ್ಟರ್ 27ರಲ್ಲಿ ರಸ್ತೆ ಬದಿ ಕಾರು ನಿಂತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಕಾರಿನ ಒಂದು ಬಾಗಿಲು ತೆರೆದಿರುವುದನ್ನು ನೋಡಿ, ಹತ್ತಿರಕ್ಕೆ ತೆರಳಿದ್ದಾರೆ. ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಮಾತನಾಡಿಸಿದ್ದಾರೆ. ಆಗ, ‘ಕುಟುಂಬದವರೆಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಾನೂ ಸಾಯಲು ಮುಂದಾಗಿದ್ದೇನೆ’ ಎಂದು ಆ ವ್ಯಕ್ತಿ ತಿಳಿಸಿದ್ದಾರೆ.
‘ಕಾರಿನಲ್ಲಿದ್ದ ಆ ವ್ಯಕ್ತಿಗೆ ಉಸಿರಾಡುವುದು ಕಷ್ಟವಾಗಿತ್ತು. ಏಕಾಏಕಿ ಕುಸಿದುಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು. ಬ್ಯಾಂಕ್‌ಗಳಿಂದ ಅಪಾರ ಸಾಲ ಪಡೆದಿದ್ದು, ತೀರಿಸಲಿಕ್ಕಾಗದೆ ಆತ್ಮಹತ್ಯೆಗೆ ಮುಂದಾಗಿದ್ದಾಗಿ ಅವರು ತಿಳಿಸಿದ್ದರು’ ಎಂದು ಸ್ಥಳೀಯರು ಹೇಳಿದ್ದಾರೆ.
ಇದೊಂದು ಆತ್ಮಹತ್ಯೆ ಪ್ರಕರಣ ಎಂಬುದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪಂಚಕುಲಾ ಡಿಸಿಪಿ ಹಿಮಾದ್ರಿ ಕೌಶಿಕ್ ತಿಳಿಸಿದ್ದಾರೆ.
ಪ್ರಕರಣದ ತನಿಖೆಗೆ ಐದು ತಂಡಗಳನ್ನು ರಚಿಸಿರುವುದಾಗಿ ಡಿಸಿಪಿ (ಅಪರಾಧ) ಅಮಿತ್ ದಹಿಯಾ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.