ADVERTISEMENT

ಹರಿಯಾಣ: ಐಎನ್‌ಎಲ್‌ಡಿ ಉಳಿವೇ ಕಷ್ಟ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 10:00 IST
Last Updated 17 ಅಕ್ಟೋಬರ್ 2019, 10:00 IST

ಚಂಡಿಗಡ: ಹರಿಯಾಣದಲ್ಲಿ ಗಾಳಿ ಯಾವ ದಿಕ್ಕಿಗೆ ಬೀಸುತ್ತಿದೆ ಎಂಬುದನ್ನು ಅಲ್ಲಿನ ಪ್ರಮುಖ ರಾಜಕಾರಣಿಗಳ ಪಕ್ಷಾಂತರವೇ ಸೂಚಿಸುವಂತಿದೆ. ಪಕ್ಷಾಂತರ ಮಾಡಿರುವ ರಾಜಕಾರಣಿಗಳ ಲೆಕ್ಕಾಚಾರವೇ ಸರಿ ಎಂದಾದರೆ ಹರಿಯಾಣದಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ.

ಹರಿಯಾಣದ ಪ್ರಮುಖ ವಿರೋಧ ಪಕ್ಷ ಇಂಡಿಯನ್ ನ್ಯಾಷನಲ್‌ ಲೋಕದಳ (ಐಎನ್‌ಎಲ್‌ಡಿ) ಮತ್ತು ಇತರ ರಾಜಕೀಯ ಪಕ್ಷಗಳ ಹಲವು ಮುಖಂಡರು ಈಗಾಗಲೇ ಬಿಜೆಪಿ ಪಾಳಯ ಸೇರಿದ್ದಾರೆ. ಪಕ್ಷಾಂತರ ಮಾಡಿರುವ ಸುಮಾರು 40 ಮುಖಂಡರಲ್ಲಿ ಹಾಲಿ ಶಾಸಕರೂ ಇದ್ದಾರೆ.

ಅತಿ ಹೆಚ್ಚು ನಷ್ಟವಾಗಿರುವುದು ಐಎನ್‌ಎಲ್‌ಡಿಗೆ. ದಾಯಾದಿ ಕಲಹದಿಂದಾಗಿಈ ಪಕ್ಷವು ಈಗಾಗಲೇ ಎರಡಾಗಿ ವಿಭಜನೆಗೊಂಡಿದೆ. ದುಷ್ಯಂತ್‌ ಚೌತಾಲಾ ನೇತೃತ್ವದ ಜೆಜೆಪಿ ಮತ್ತು ಐಎನ್‌ಎಲ್‌ಡಿ ಒಂದಾಗುವ ಸಾಧ್ಯತೆ ಕಾಣಿಸುತ್ತಿಲ್ಲ. ಹಾಗಾಗಿ, ಈ ಬಾರಿಯ ಚುನಾವಣೆ ಈ ಎರಡೂ ಪಕ್ಷಗಳ ಅಸ್ತಿತ್ವವನ್ನು ನಿರ್ಧರಿಸಬಹುದು ಎನ್ನಲಾಗಿದೆ.

ADVERTISEMENT

ಎರಡೂ ಗುಂಪುಗಳ ನಡುವೆ ರಾಜಿ ಮಾಡಲು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಮತ್ತು ಜಾತಿ ಪಂಚಾಯಿತಿಯ ಪ್ರಭಾವಿ ಮುಖಂಡರು ಶ್ರಮಿಸಿದ್ದಾರೆ. ಆದರೆ, ಅದು ಫಲ ನೀಡಿಲ್ಲ. ಈಗ, ಬಿಜೆಪಿ ಭಾರಿ ಪ್ರಬಲ ಎಂಬಂತೆ ಕಾಣಿಸುತ್ತಿರುವ ಈ ಸಂದರ್ಭದಲ್ಲಿ ಎರಡೂ ಪಕ್ಷಗಳು ಅಸ್ತಿತ್ವ ಕಳೆದುಕೊಳ್ಳುವುದು ಸನ್ನಿಹಿತ ಎಂದು ಹೇಳಲಾಗುತ್ತಿದೆ.

2014ರ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಐಎನ್‌ಎಲ್‌ಡಿ ಗೆದ್ದಿತ್ತು. ಆದರೆ, ಪಕ್ಷದಲ್ಲಿ ಈಗ ಉಳಿದಿರುವ ಶಾಸಕರ ಸಂಖ್ಯೆ ನಾಲ್ಕು ಮಾತ್ರ. ಕಳೆದ ಬಾರಿ ಆ ಪಕ್ಷಕ್ಕೆ ಶೇ 24ರಷ್ಟು ಮತವೂ ಸಿಕ್ಕಿತ್ತು. ಒಳಜಗಳದಿಂದಾಗಿ ಈ ಬಾರಿ ಇಂತಹ ಸಾಧನೆ ಸಾಧ್ಯವೇ ಇಲ್ಲದ ಸ್ಥಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.