ADVERTISEMENT

ಕರ್ನಾಲ್‌ ಘಟನೆಯ ತನಿಖೆಗೆ ಸಿದ್ಧ: ಹರಿಯಾಣ ಗೃಹ ಸಚಿವ

ಪಿಟಿಐ
Published 9 ಸೆಪ್ಟೆಂಬರ್ 2021, 12:00 IST
Last Updated 9 ಸೆಪ್ಟೆಂಬರ್ 2021, 12:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ: ಐಎಎಸ್ ಅಧಿಕಾರಿಯ ವಿವಾದಾತ್ಮಕ ಹೇಳಿಕೆ ಮತ್ತು ರೈತರ ಮೇಲಿನ ಪೋಲಿಸ್ ಲಾಠಿ ಚಾರ್ಜ್ ಸೇರಿದಂತೆ ಕರ್ನಾಲ್ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಸರ್ಕಾರ ಸಿದ್ಧವಿದೆ ಎಂದು ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಗುರುವಾರ ಹೇಳಿದರು.

ಅಂಬಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರಾದರೂ ಬೇಡಿಕೆಯಿಟ್ಟ ಮಾತ್ರಕ್ಕೆ ತನಿಖೆ ನಡೆಸದೇ ಯಾರನ್ನೂ ಗಲ್ಲಿಗೇರಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಾವು ನಿಷ್ಪಕ್ಷಪಾತ ತನಿಖೆಗೆ ಸಿದ್ಧರಿದ್ದೇವೆ. ಆದರೆ ಇದು ಕೇವಲ ಆಯುಷ್ ಸಿನ್ಹಾ ಅವರಿಗೆ ಮಾತ್ರ ಸಂಬಂಧಿಸಿರುವುದಿಲ್ಲ. ಇಡೀ ಕರ್ನಾಲ್ ಘಟನೆ ಒಳಗೊಂಡಿರಲಿದೆ. ತನಿಖೆಯಲ್ಲಿ ರೈತರು ಅಥವಾ ಅವರ ನಾಯಕರು ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಅವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಬೇಕೆನ್ನುವುದು ಪರಿಗಣಿತವಾಗಬೇಕಲ್ಲವೇ’ ಎಂದು ವಿಜ್ ಹೇಳಿದರು.

ADVERTISEMENT

‘ಕರ್ನಾಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ನಿಜವಾದ ಬೇಡಿಕೆಗಳನ್ನು ಮಾತ್ರ ಸ್ವೀಕರಿಸಬಹುದು. ಯಾರೋ ಹೇಳಿದ ಮಾತ್ರಕ್ಕೆ ನಾವು ಯಾರನ್ನೂ ಗಲ್ಲಿಗೇರಿಸಲು ಸಾಧ್ಯವಿಲ್ಲ. ದೇಶದಲ್ಲಿ ರೈತರಿಗೊಂದು ಮತ್ತು ಉಳಿದವರಿಗೊಂದು ಕಾನೂನು ಇರಬಾರದು. ಯಾರೇ ಅಪರಾಧ ಎಸಗಿದರೂ ಐಪಿಸಿ ಪ್ರಕಾರವೇ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಅಪರಾಧಿಗಳನ್ನು ಕಂಡುಹಿಡಿಯಲು ಮೊದಲು ತನಿಖೆ ನಡೆಸಬೇಕು’ ಎಂದು ಹೇಳಿದರು.

ಆಗಸ್ಟ್ 28ರಂದು ಕರ್ನಾಲ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿಪ್ರಹಾರ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ವಿವಾದಾತ್ಮಕ ಹೇಳಿಕೆ ನೀಡಿದ ಐಎಎಸ್‌ ಅಧಿಕಾರಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕರ್ನಾಲ್‌ನಲ್ಲಿ ಬಿಜೆಪಿ ಕಾರ್ಯಕ್ರಮದ ಸ್ಥಳಕ್ಕೆ ಮೆರವಣಿಗೆ ತೆರಳದಂತೆ ಪೊಲೀಸರು ರೈತರ ಮೇಲೆ ಬಲಪ್ರಯೋಗ ಮಾಡಿದಾಗ 10 ಜನರು ಗಾಯಗೊಂಡಿದ್ದರು. ಕಳೆದ ತಿಂಗಳು ರೈತರ ಪ್ರತಿಭಟನೆಯ ಸಮಯದಲ್ಲಿ ರೈತರು ಗಡಿ ದಾಟಿದರೆ ರೈತರ ತಲೆ ಒಡೆಯುವಂತೆ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.