ADVERTISEMENT

ಅಮೃತ್‌ಪಾಲ್‌ಗಾಗಿ ಮುಂದುವರಿದ ಶೋಧ ಕಾರ್ಯ

ಪಿಟಿಐ
Published 24 ಮಾರ್ಚ್ 2023, 16:01 IST
Last Updated 24 ಮಾರ್ಚ್ 2023, 16:01 IST
   

ಚಂಡೀಗಢ: ಧರ್ಮ ಪ್ರಚಾರಕ, ಖಾಲಿಸ್ತಾನ ಪರ ಸಹಾನುಭೂತಿ ಹೊಂದಿರುವ ಅಮೃತ್‌ಪಾಲ್‌ ಸಿಂಗ್‌ ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ‘ಹರಿಯಾಣದ ಕುರುಕ್ಷೇತ್ರದಲ್ಲಿ ಅಮೃತ್‌ಪಾಲ್‌ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ

ಕಾರಣಕ್ಕಾಗಿ ರಾಜ್ಯದಾದ್ಯಂತ ಕಣ್ಗಾವಲನ್ನು ಹೆಚ್ಚಿಸಲಾಗಿದೆ’ ಎಂದು ಹರಿಯಾಣ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
‘ಅಮೃತ್‌ಪಾಲ್‌ ಅವರು ಪಂಜಾಬ್‌ನಿಂದ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕ ಕೂಡಲೇ ಇತರ ರಾಜ್ಯಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು’ ಎಂದು ಪಂಜಾಬ್‌ನ ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

‘ಅಮೃತ್‌ಪಾಲ್‌ ಹಾಗೂ ಆತನ ಸಹಚರರು ಎಲ್ಲಿದ್ದಾರೆ ಎನ್ನುವ ಕುರಿತು ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ. ಮಾರ್ಚ್‌ 19ರಂದು ಕುರುಕ್ಷೇತ್ರದಲ್ಲಿ ಬಲ್ಜಿತ್‌ ಕೌರ್‌ ಎನ್ನುವ ಮಹಿಳೆ ತನ್ನ ಮನೆಯಲ್ಲಿ ಅಮೃತ್‌ಪಾಲ್‌ ಅವರಿಗೆ ನೆಲೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಈಕೆಯನ್ನು ಗುರುವಾರ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ಈ ಮಧ್ಯೆ, ಅಮೃತ್‌ಪಾಲ್‌ ಹಾಗೂ ಆತನ ಸಹಚರ ಪಾಪಲ್‌ಪ್ರೀತ್‌ ಅವರು ಜಲಂಧರ್‌ನಲ್ಲಿ ಎತ್ತಿನಗಾಡಿವೊಂದರಲ್ಲಿ ಹೋಗುತ್ತಿದ್ದ ದೃಶ್ಯವು ಪೊಲೀಸರಿಗೆ ದೊರೆತಿತ್ತು. ಈ ಎತ್ತಿನಗಾಡಿಯನ್ನು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ತನಿಖೆ ನಡೆಸಿದ್ದಾರೆ. ‘ಆ ಸಮಯದಲ್ಲಿ ಈ ಇಬ್ಬರ ಬಗ್ಗೆ ನನಗೆ ತಿಳಿದಿರಲಿಲ್ಲ’ ಎಂದು ವ್ಯಕ್ತಿಯು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಜೊತೆಗೆ, ಅಮೃತ್‌ಪಾಲ್‌ ಅವರ ಸಹಚರರೊಬ್ಬರು, ಅಮೃತ್‌ಪಾಲ್‌ ಅವರ ಹುಟ್ಟೂರು ಅಮೃತಸರ ಜಿಲ್ಲೆಯ ಜಲ್ಲಾಪುರ ಖೇರಾದಲ್ಲಿ ಗುಂಡು ಹಾರಿಸುತ್ತಿರುವ ವಿಡಿಯೊ ಪೊಲೀಸರಿಗೆ ದೊರೆತಿದೆ. ಕೆಲವು ಸಹಚರರು ಶಸ್ತ್ರಾಸ್ತ್ರಗಳೊಂದಿಗೆ ತೆಗೆಸಿಕೊಂಡಿದ್ದ ಫೋಟೊಗಳೂ ದೊರೆತಿವೆ.

ಅಮೃತ್‌ಪಾಲ್‌ನ ಸಹಚರ ಪಾಪಲ್‌ಪ್ರೀತ್‌ ಸಿಂಗ್‌ ಅವರಿಗೆ ಆದಾಯ ತೆರಿಗೆ ಇಲಾಖೆಯು ಶುಕ್ರವಾರ ನೋಟಿಸ್‌ ನೀಡಿದೆ. ತಮ್ಮ ಖಾತೆಗೆ ₹4.48 ಲಕ್ಷ ವರ್ಗಾವಣೆಯಾಗಿರುವುದರ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅತ್ಯುನ್ನತ ಬಲಿದಾನಕ್ಕಾಗಿ ಸಿದ್ಧರಾಗಿ’

‘ಅತ್ಯುನ್ನತ ಬಲಿದಾನಕ್ಕಾಗಿ’ ಸಿದ್ಧರಾಗಿ... ಶಸ್ತ್ರಾಸ್ತ್ರ ಪರವಾನಗಿಯನ್ನು ತಮ್ಮಯಿಂದ ಕಿತ್ತುಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ...’ ಇವು ಅಮೃತ್‌ಪಾಲ್‌ ಅವರು ತಮ್ಮ ಬೆಂಬಲಿಗರಿಗೆ ಭೋದಿಸುತ್ತಿದ್ದರು ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‘ಪಂಜಾಬ್‌ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗುವ ಮೊದಲು 10 ದಿನಗಳ ಅಂತರದಲ್ಲಿ ಅಮೃತ್‌ಪಾಲ್‌ ಅವರು ಐದು ಸಭೆಗಳನ್ನು ನಡೆಸಿದ್ದರು. ಈ ಸಭೆಗಳಲ್ಲಿ ಸುಮಾರು 800ರಿಂದ 1000 ಮಂದಿ ಸೇರಿದ್ದರು’ ಎಂದಿದ್ದಾರೆ.

‘ಮುಂದಿನ ಪೀಳಿಗೆಯವರಿಗಾಗಿ ‘ಖಾಲಸಾ ಆಳ್ವಿಕೆ’ಯನ್ನು ಸ್ಥಾಪಿಸುವ ಸಲುವಾಗಿ ಕೆಲಸ ಮಾಡುವಂತೆ ಯುವಕರನ್ನು ಪ್ರೇರೇಪಿಸುತ್ತಿದ್ದರು. ಸಿಖ್‌ ಪಂಥದಲ್ಲಿ ಬಿರುಕು ಮೂಡಿದ್ದರಿಂದ ಶತ್ರುಗಳ ದಾಳಿಗೆ ಸಿಲುಕುವಂತಾಗಿದೆ ಎಂದು ಭೋದಿಸುತ್ತಿದ್ದರು’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.