ADVERTISEMENT

ಸ್ಟ್ಯಾನ್‌ ಸ್ವಾಮಿ ಕೆಲಸಗಳನ್ನು ನಾವು ಗೌರವಿಸುತ್ತೇವೆ: ಬಾಂಬೆ ಹೈಕೋರ್ಟ್‌

ಬುಡಕಟ್ಟು ಹಕ್ಕುಗಳ ಹೋರಾಟಗಾರ

ಪಿಟಿಐ
Published 19 ಜುಲೈ 2021, 14:30 IST
Last Updated 19 ಜುಲೈ 2021, 14:30 IST
ಬಾಂಬೆ ಹೈಕೋರ್ಟ್‌
ಬಾಂಬೆ ಹೈಕೋರ್ಟ್‌   

ಮುಂಬೈ: ‘ಬುಡಕಟ್ಟು ಹಕ್ಕುಗಳ ಹೋರಾಟಗಾರ ದಿವಂಗತ, ಫಾದರ್ ಸ್ಟ್ಯಾನ್ ಸ್ವಾಮಿ ಅವರು ಅದ್ಭುತ ವ್ಯಕ್ತಿ ಮತ್ತು ಅವರ ಕೆಲಸಗಳನ್ನು ನ್ಯಾಯಾಲಯ ಗೌರವಿಸುತ್ತದೆ’ ಎಂದು ಬಾಂಬೆ ಹೈಕೋರ್ಟ್‌ ಸೋಮವಾರ ಹೇಳಿದೆ.

ಎಲ್ಗಾರ್ ಪರಿಷತ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವಂಗತ ಸ್ಟ್ಯಾನ್ ಸ್ವಾಮಿ ಅವರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ಮರಣೋತ್ತರವಾಗಿಬಾಂಬೆ ಹೈಕೋರ್ಟ್‌ ನಡೆಸುತ್ತಿದೆ.

‘ಸ್ಟ್ಯಾನ್ ಸ್ವಾಮಿ ಅವರು ಒಬ್ಬ ಉತ್ತಮ ವ್ಯಕ್ತಿ. ಅವರ ವಿರುದ್ಧ ಕಾನೂನು ಪ್ರಕರಣಗಳು ಏನೇ ಇರಲಿ. ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ನಾವು ತುಂಬಾ ಗೌರವಿಸುತ್ತೇವೆ’ ಎಂದು ನ್ಯಾಯಮೂರ್ತಿಗಳಾದ ಎಸ್‌.ಎಸ್. ಶಿಂಧೆ ಮತ್ತು ಎನ್‌.ಜೆ. ಜಾಮದಾರ್‌ ಅವರನ್ನೊಳಗೊಂಡ ಪೀಠವು ಹೇಳಿದೆ.

ADVERTISEMENT

ಸ್ವಾಮಿ ಅವರ ಸಾವಿನ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ನ್ಯಾಯಾಂಗದ ಬಗ್ಗೆ ಕೇಳಿಬಂದ ಟೀಕೆಗಳನ್ನೂ ಪೀಠ ಇದೇ ಸಂದರ್ಭ ಉಲ್ಲೇಖಿಸಿತು.

ವಿಚಾರಣೆ ಪ್ರಾರಂಭವಾಗುವವರೆಗೆ ಕಾರಾಗೃಹಗಳಲ್ಲಿ ಕಾಯುತ್ತ ವಿಚಾರಣಾಧೀನ ಕೈದಿಗಳು ಹೆಗೆಲ್ಲಾ ಹೈರಾಣಾಗಬೇಕಾಗುತ್ತದೆ ಎಂದು ಪೀಠ ವಿಷಾದ ವ್ಯಕ್ತಪಡಿಸಿತು.

‘ಸಾಮಾನ್ಯವಾಗಿ ನಮಗೆ ಸಮಯವಿರುವುದಿಲ್ಲ, ಆದರೆ ನಾನು (ಸ್ವಾಮಿಯ) ಅಂತ್ಯಕ್ರಿಯೆಯನ್ನು ನೋಡಿದೆ. ಇದು ತುಂಬಾ ಅರ್ಥಪೂರ್ಣವಾಗಿತ್ತು. ಅವರು ಅದ್ಭುತ ವ್ಯಕ್ತಿ. ಅವರು ಸಮಾಜಕ್ಕೆ ಯಾವ ರೀತಿಯ ಸೇವೆ ಸಲ್ಲಿಸಿದ್ದಾರೆ ಎನ್ನುವುದನ್ನು ಅದು ತೋರಿಸಿತು. ಕಾನೂನುಬದ್ಧವಾಗಿ, ಅವರ ವಿರುದ್ಧ ಏನೇ ಪ್ರಕರಣಗಳು ಇರಲಿ, ಅದು ಬೇರೆಯ ವಿಷಯ. ಅವರ ಕೆಲಸದ ಬಗ್ಗೆ ನಮಗೆ ಅಪಾರ ಗೌರವವಿದೆ’ ಎಂದು ನ್ಯಾಯಮೂರ್ತಿ ಶಿಂಧೆ ಹೇಳಿದರು.

ಇದೇ ಪೀಠವು ಸ್ಟ್ಯಾನ್ ಸ್ವಾಮಿ ಅವರ ವೈದ್ಯಕೀಯ ಜಾಮೀನು ಅರ್ಜಿ ವಿಚಾರಣೆಯನ್ನು ಜು.5ರಂದು ನಡೆಸಿತ್ತು. ಪ್ರಕರಣದ ಮುಂದಿನ ವಿಚಾರಣೆಯನ್ನು ಹೈಕೋರ್ಟ್‌ ಜುಲೈ 23ರಂದು ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.