ADVERTISEMENT

ಸೆಂಥಿಲ್‌ ಬಾಲಾಜಿ ಬಂಧಿಸುವ ಅಧಿಕಾರವಿದೆ: ಮದ್ರಾಸ್ ಹೈಕೋರ್ಟ್‌ಗೆ ಇ.ಡಿ ಮಾಹಿತಿ

ಪಿಟಿಐ
Published 12 ಜುಲೈ 2023, 14:30 IST
Last Updated 12 ಜುಲೈ 2023, 14:30 IST
   

ಚೆನ್ನೈ: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಇಂಧನ ಸಚಿವ ವಿ.ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿ, ವಶಕ್ಕೆ ಪಡೆಯುವ ಅಧಿಕಾರ ಇದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದೆ. 

ಕಳೆದ ವಾರ ವಿಭಾಗೀಯ ಪೀಠವು ನೀಡಿದ ಭಿನ್ನ ತೀರ್ಪಿನ ನಂತರ ಬಾಲಾಜಿ ಅವರ ಪತ್ನಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಗೆ ನೇಮಕಗೊಂಡಿರುವ ಮೂರನೇ ನ್ಯಾಯಮೂರ್ತಿ ಸಿ. ವಿ. ಕಾರ್ತಿಕೇಯನ್ ಅವರಿಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಿಷಯ ತಿಳಿಸಿದರು.‌

ಇ.ಡಿ ತನ್ನ ಶಾಸನಬದ್ಧ ಕರ್ತವ್ಯ ನಿರ್ವಹಿಸಬೇಕಾಗಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದಕ್ಕೆ ಸಂಬಂಧಿಸಿದ ಸಾಕಷ್ಟು ಪುರಾವೆ ಹೊಂದಿದ್ದರೆ, ಆ ವ್ಯಕ್ತಿಯನ್ನು ಬಂಧಿಸಬಹುದು ಮತ್ತು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ದೂರು ದಾಖಲಿಸಿದ ನಂತರ ಮತ್ತು ಬಂಧನದ ಬಳಿಕ ತನಿಖೆ ನಡೆಸಲು ಯೋಚಿಸಲಾಗಿದೆ ಎಂದು ಮೆಹ್ತಾ ಹೇಳಿದರು. 

ADVERTISEMENT

ಇ.ಡಿ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳಲ್ಲ ಎಂದ ಮಾತ್ರಕ್ಕೆ ಅವರಿಗೆ ತನಿಖೆ ನಡೆಸುವ ಅಧಿಕಾರವಿಲ್ಲ ಎಂದರ್ಥವಲ್ಲ. ಪಿಎಂಎಲ್‌ಎ ಪ್ರಕರಣದಲ್ಲಿ ಆರೋಪಿಯನ್ನು ಬಿಡುಗಡೆ ಮಾಡುವ ಅಧಿಕಾರ ಇ.ಡಿಗೆ ಇಲ್ಲ. ಅವರನ್ನು ನ್ಯಾಯಾಲಯ ಮಾತ್ರ ಬಿಡುಗಡೆ ಮಾಡಬಹುದು. ಆದ್ದರಿಂದ ಇ.ಡಿ ಅಧಿಕಾರಿಗಳನ್ನು ಪೊಲೀಸ್‌ ಅಧಿಕಾರಿಗಳೆಂದು ಪರಿಗಣಿಸಲಾಗುವುದಿಲ್ಲ ಎಂದು ‌ತಿಳಿಸಿದರು. 

ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿದ ಮೆಹ್ತಾ, ‍ಪಿಎಂಎಲ್‌ಎ ಪ್ರಕರಣದಲ್ಲಿ ಆರೋಪಿಯ ವಿಚಾರಣೆ ನಡೆಸುವುದು ತನಿಖಾ ಸಂಸ್ಥೆಯ ನೈತಿಕ ಕರ್ತವ್ಯವಾಗಿದೆ ಎಂದು ಹೇಳಿದರು.  

ಮೆಹ್ತಾ ಅವರ ವಾದ ಪೂರ್ಣಗೊಂಡ ಬಳಿಕ, ಬಂಧಿತ ಸಚಿವರ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಉತ್ತರಕ್ಕಾಗಿ ನ್ಯಾಯಮೂರ್ತಿ ವಿಚಾರಣೆಯನ್ನು ಜುಲೈ 14 ಕ್ಕೆ ಮುಂದೂಡಿದರು.‌

ಈ ನಡುವೆ ನಗರ ನ್ಯಾಯಾಲಯವು ಬುಧವಾರ ಸೆಂಥಿಲ್ ಬಾಲಾಜಿಯ ನ್ಯಾಯಾಂಗ ಬಂಧನ ಅವಧಿಯನ್ನು ಜುಲೈ 26 ರವರೆಗೆ  ವಿಸ್ತರಿಸಿದೆ.

ಹಿಂದಿನ ಎಐಎಡಿಎಂಕೆ ಆಡಳಿತದಲ್ಲಿ ಸಾರಿಗೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ನಗದು ಹಗರಣದಲ್ಲಿ ಬಾಲಾಜಿ ಅವರನ್ನು ಕಳೆದ ತಿಂಗಳು ಪಿಎಂಎಲ್ಎ ಅಡಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.