ADVERTISEMENT

ಸೂಚಿಸಿದ ಸ್ಥಳದಲ್ಲಿ 15 ದಿನದೊಳಗೆ ಕರ್ತವ್ಯಕ್ಕೆ ಹಾಜರಾಗಲು ಸೂಚನೆ

ಸೇನೆಯಲ್ಲಿರುವ ದಂಪತಿಗೆ ದೆಹಲಿ ಹೈಕೋರ್ಟ್‌ ಆದೇಶ

ಪಿಟಿಐ
Published 20 ಅಕ್ಟೋಬರ್ 2020, 10:48 IST
Last Updated 20 ಅಕ್ಟೋಬರ್ 2020, 10:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಿದ ಕ್ರಮವನ್ನು ಪ್ರಶ್ನಿಸಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ದೆಹಲಿ ಹೈಕೋರ್ಟ್‌, ವರ್ಗಾವಣೆಯಲ್ಲಿ ತೋರಿರುವ ಹೊಸ ಹುದ್ದೆಗಳಲ್ಲಿ ಇಬ್ಬರೂ 15 ದಿನಗಳ ಒಳಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಮಂಗಳವಾರ ಸೂಚಿಸಿದೆ.

ಕರ್ನಲ್‌ ಅಮಿತ್‌ಕುಮಾರ್‌ ಅವರು ಸೇನೆಯ ಜಡ್ಜ್ ಅಡ್ವೋಕೇಟ್‌ ಜನರಲ್‌ (ಜೆಎಜಿ) ವಿಭಾಗದಲ್ಲಿ ಅಧಿಕಾರಿಯಾಗಿದ್ದಾರೆ. ಪತ್ನಿಯೂ ಸೇನಾಧಿಕಾರಿಯಾಗಿದ್ದು, ಇಬ್ಬರೂ ಜೋಧಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕರ್ನಲ್‌ ಅಮಿತ್‌ಕುಮಾರ್‌ ಅವರನ್ನು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಕ್ಕೆ, ಕರ್ನಲ್‌ ಹುದ್ದೆಗೆ ಬಡ್ತಿ ಪಡೆಯಲಿರುವ ಪತ್ನಿಯನ್ನು ಪಂಜಾಬ್‌ನ ಭಟಿಂಡಾಕ್ಕೆ ವರ್ಗಾವಣೆ ಮಾಡಲಾಗಿದೆ. ತಮ್ಮ ಈ ವರ್ಗಾವಣೆಯನ್ನು ಪ್ರಶ್ನಿಸಿ, ದಂಪತಿ ಹೈಕೋರ್ಟ್‌ ಮೊರೆ ಹೋಗಿದ್ದರು.

ADVERTISEMENT

ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ರಾಜೀವ್‌ ಸಹಾಯ್‌ ಎಂಡ್ಲಾ ಹಾಗೂ ಆಶಾ ಮೆನನ್‌ ಅವರಿರುವ ನ್ಯಾಯಪೀಠ, ‘ಇಬ್ಬರನ್ನೂ ಒಂದೇ ಸ್ಥಳಕ್ಕೆ ವರ್ಗಾವಣೆ ಮಾಡಬೇಕು ಎಂದು ಕೋರಿ ಅಮಿತ್‌ಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲು ಸೇನೆ ಸೂಕ್ತ ಕಾರಣಗಳನ್ನು ನೀಡಿದೆ. ಕೋರ್ಟ್‌ ಮಧ್ಯಪ್ರವೇಶಿಸಬಹುದಾದಂತಹ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ’ ಎಂದು ಅಭಿಪ್ರಾಯಪಟ್ಟಿತು.

ಒಂದೇ ಸ್ಥಳಕ್ಕೆ ವರ್ಗಾಯಿಸುವಂತೆ ಕೋರಿ ದಂಪತಿ ಸಲ್ಲಿಸಿದ್ದ ಅರ್ಜಿ ಕುರಿತಂತೆ ನಾಲ್ಕು ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಸೇನೆಗೆ ಸೂಚಿಸಿ ನ್ಯಾಯಪೀಠ ಸೆ. 15ರಂದು ಆದೇಶ ಹೊರಡಿಸಿತ್ತು. ಅಲ್ಲದೇ, ಅಮಿತ್‌ಕುಮಾರ್ ದಂಪತಿ ಹೊಸ ಹುದ್ದೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವುದಕ್ಕೆ ಅ. 20ರ ವರೆಗೆ ತಡೆಯಾಜ್ಞೆಯನ್ನೂ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.