ADVERTISEMENT

‘ಉದ್ದೇಶಪೂರ್ವಕ ಸುಸ್ತಿದಾರರ ವಿಚಾರಣೆ: ಆರೋಪಿ ಪಾತ್ರವೇನು?’

ಪಿಟಿಐ
Published 4 ಜೂನ್ 2019, 19:26 IST
Last Updated 4 ಜೂನ್ 2019, 19:26 IST
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ   

ಮುಂಬೈ: ಉದ್ದೇಶಪೂರ್ವಕ ಸುಸ್ತಿದಾರ ಎನ್ನುವ ಆರೋಪ ಎದುರಿಸುತ್ತಿರುವವರಿಗೆ, ನ್ಯಾಯಾಲಯದ ವಿಚಾರಣೆಯಲ್ಲಿ ಪಾಲ್ಗೊಳ್ಳುವ ಹಕ್ಕು ಇದೆಯೆ ಎನ್ನುವುದನ್ನು ತಿಳಿಸಬೇಕು ಎಂದು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಬಾಂಬೆ ಹೈಕೋರ್ಟ್ ಸೂಚಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ಬಹುಕೋಟಿ ಹಗರಣದ ಆರೋಪಿ ಮೆಹುಲ್ ಚೋಕ್ಸಿ ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಐ.ಎ. ಮೊಹಾಂತಿ ಹಾಗೂ ಎ.ಎಂ. ಬದರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಮಾಹಿತಿ ಕೇಳಿದೆ.

‘ಸದ್ಯಕ್ಕೆ ಭಾರತದಿಂದ ಹೊರಗಿರುವ ಚೋಕ್ಸಿ ಅವರು, ಅನಾರೋಗ್ಯದ ಕಾರಣದಿಂದ ದೇಶಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ಅವರು ವಿಚಾರಣೆ ತಪ್ಪಿಸಿಕೊಳ್ಳುತ್ತಿಲ್ಲ’ ಎಂದು ಚೋಕ್ಸಿ ಪರ ವಕೀಲ ವಿಜಯ್ ಅಗರವಾಲ್ ಅವರು ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದರು.

ADVERTISEMENT

ಚೋಕ್ಸಿ ಅವರನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸುವಂತೆ ಕೋರಿ ವಿಶೇಷ ನ್ಯಾಯಾಲಯಕ್ಕೆ ಇ.ಡಿ ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಜಾಗೊಳಿಸಲು ಕೋರಿ ಹೈಕೋರ್ಟ್‌ನಲ್ಲಿ ಚೋಕ್ಸಿ ಮನವಿ ಸಲ್ಲಿಸಿದ್ದಾರೆ.

‘ಯಾರ ಹೇಳಿಕೆ ಆಧಾರದ ಮೇಲೆ ಇ.ಡಿ ಈ ಅರ್ಜಿ ಸಲ್ಲಿಸಿದೆಯೋ ಅವರನ್ನು ವಿಚಾರಣೆಗೊಳಪಡಿಸಲು ತನಗೆ ಅನುಮತಿ ನೀಡಬೇಕು’ ಎಂದು ಅವರು ಮತ್ತೊಂದು ಅರ್ಜಿಯಲ್ಲಿ ಕೋರಿದ್ದಾರೆ.

ಇ.ಡಿ ಸಲ್ಲಿಸಿರುವ ಅರ್ಜಿಯನ್ನು,ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ರಚಿಸಲಾಗಿರುವ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಮುಂದಿನ ವಿಚಾರಣೆಯನ್ನು ವಿಭಾಗೀಯ ನ್ಯಾಯಪೀಠ ಇದೇ 10ಕ್ಕೆ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.