ADVERTISEMENT

ಡಿಕೆಶಿ ಆಪ್ತರ ವಿಚಾರಣೆಗೆ ದೆಹಲಿ ಹೈಕೋರ್ಟ್‌ ನಿರ್ದೇಶನ

ಅಕ್ರಮ ಹಣ ವರ್ಗಾವಣೆ ಪ್ರಕರಣ:

ಪಿಟಿಐ
Published 9 ಅಕ್ಟೋಬರ್ 2020, 10:50 IST
Last Updated 9 ಅಕ್ಟೋಬರ್ 2020, 10:50 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಕೆಲವು ಸಂಬಂಧಿಕರು ಮತ್ತು ಆಪ್ತರನ್ನು ವಿಚಾರಣೆಗೆ ಒಳಪಡಿಸುವಂತೆ ದೆಹಲಿ ಹೈಕೋರ್ಟ್‌ ಶುಕ್ರವಾರ ಜಾರಿ ನಿರ್ದೇಶನಾಲಯಗೆ (ಇ.ಡಿ) ಸೂಚಿಸಿದೆ.

ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಡಿ.ಕೆ. ಶಿವಕುಮಾರ್‌ ಅವರ ಕೆಲವು ಸಂಬಂಧಿಕರು ಮತ್ತು ಆಪ್ತರಿಗೆ ಸಾಕ್ಷಿಗಳಾಗಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್‌ ನೀಡಿತ್ತು. ಈ ಸಮನ್ಸ್‌ ಪ್ರಶ್ನಿಸಿ ಶಿವಕುಮಾರ್‌ ಅವರ ಏಳು ಸಂಬಂಧಿಕರು ಮತ್ತು ಆಪ್ತರು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.

‘ನ್ಯಾಯದ ದೃಷ್ಟಿಯಿಂದ ಕರ್ನಾಟಕದ ನಿವಾಸಿಗಳಾಗಿರುವ ಅರ್ಜಿದಾರರು ವಿಚಾರಣೆಗೆ ಒಳಪಡಬೇಕು’ ಎಂದು ನ್ಯಾಯಮೂರ್ತಿ ಯೋಗೇಶ್‌ ಖನ್ನಾ ಅವರು ನಿರ್ದೇಶನ ನೀಡಿದ್ದಾರೆ. ಕೋವಿಡ್‌–19 ಹಿನ್ನೆಲೆಯಲ್ಲಿ ವಿಡಿಯೊ ಕಾನ್ಫೆರನ್ಸ್‌ ಮೂಲಕ ಇವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಸೂಚಿಸಿದ್ದಾರೆ.

ADVERTISEMENT

ಎಚ್‌. ರಾಜೇಶ್‌, ಗಂಗಾಶರಣ್‌, ಜಯಶೀಲಾ, ಜಿ. ಚಂದ್ರ, ಕೆ.ವಿ. ಲಕ್ಷ್ಮಮ್ಮ, ಮೀನಾಕ್ಷಿ ಮತ್ತು ಜಿ. ಹನುಮಂತಯ್ಯ ಅವರು ಸಮನ್ಸ್‌ ಪ್ರಶ್ನಿಸಿ ಈ ಅರ್ಜಿಗಳನ್ನು ಸಲ್ಲಿಸಿದ್ದರು.

‘ಅಪರಾಧ ಪ್ರಕ್ರಿಯೆ ಸಂಹಿತೆ (ಸಿಆರ್‌ಪಿಸಿ) ಉಲ್ಲಂಘಿಸಿ ಸಮನ್ಸ್‌ ನೀಡಲಾಗಿದೆ. ಪ್ರಮುಖ ಆರೋಪಿಯ ಸಂಬಂಧಿಕರು, ಆಪ್ತರು ಎನ್ನುವ ಕಾರಣಕ್ಕೆ ಒತ್ತಡ ಹೇರುವ ದೃಷ್ಟಿಯಿಂದಲೇ ಸಮನ್ಸ್‌ ನೀಡಲಾಗಿದೆ’ ಎಂದು ಅರ್ಜಿದಾರರ ಪರ ವಕೀಲ ಮೋಹಿತ್‌ ಮಾಥುರತ್‌ ವಾದ ಮಂಡಿಸಿದ್ದರು.

‘ಅರ್ಜಿದಾರರು ವಿಚಾರಣೆಗೆ ಸಹಕಾರ ನೀಡಲಿದ್ದಾರೆ’ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

‘ಈ ಮೊದಲು ದಾಖಲೆಗಳನ್ನು ಅರ್ಜಿದಾರರಿಂದ ಕೋರಲಾಗಿತ್ತು. ಆದರೆ, ಕೆಲವು ದಾಖಲೆಗಳ ಬಗ್ಗೆ ಸ್ಪಷ್ಟನೆ ಅಗತ್ಯವಿರುವುದರಿಂದ ಖುದ್ದು ಹಾಜರಿ ಅಗತ್ಯವಿದೆ’ ಎಂದು ಇ.ಡಿ. ಪರ ವಕೀಲ ಅಮಿತ್‌ ಮಹಾಜನ್‌ ಪ್ರತಿಪಾದಿಸಿದರು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಡಿ.ಕೆ. ಶಿವಕುಮಾರ್‌ ಅವರನ್ನು ಕಳೆದ ವರ್ಷ ಸೆಪ್ಟೆಂಬರ್‌ 3ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಬಳಿಕ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ ಜಾಮೀನು ನೀಡಿತ್ತು.

ತೆರಿಗೆ ವಂಚನೆ ಮತ್ತು ’ಹವಾಲಾ’ ವಹಿವಾಟು ನಡೆಸಿದ ಆರೋಪದ ಮೇರೆಗೆ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆ ದಾಖಲಿಸಿದ್ದ ಆರೋಪಪಟ್ಟಿ ಆಧರಿಸಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.