ADVERTISEMENT

ಪರೀಕ್ಷೆ ಮುಂದೂಡಿದ ಮಾಹಿತಿ ನೀಡದ್ದಕ್ಕೆ ಆಕ್ರೋಶ: ದೆಹಲಿ ವಿ.ವಿಗೆ ಕೋರ್ಟ್ ನೋಟಿಸ್

ಪಿಟಿಐ
Published 30 ಜೂನ್ 2020, 7:45 IST
Last Updated 30 ಜೂನ್ 2020, 7:45 IST
ನ್ಯಾಯಾಲಯ–ಪ್ರಾತಿನಿಧಿಕ ಚಿತ್ರ
ನ್ಯಾಯಾಲಯ–ಪ್ರಾತಿನಿಧಿಕ ಚಿತ್ರ   

ನವದೆಹಲಿ: ತೆರೆದ ಪುಸ್ತಕ ಕ್ರಮದಡಿ ಆನ್‍ಲೈನ್‍ ಪರೀಕ್ಷೆನಡೆಸುವ ದಿನಾಂಕವನ್ನು ಮುಂದೂಡಿದನಿರ್ಧಾರವನ್ನು ಕೋರ್ಟ್ ಗಮನಕ್ಕೆ ತಾರದೇ ತಪ್ಪುಹಾದಿಗೆಳೆದಿರುವುದಕ್ಕೆ ದೆಹಲಿ ವಿಶ್ವವಿದ್ಯಾಲಯ ಮತ್ತು ಅದರ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆ ಏಕೆ ನಡೆಸಬಾರದು ಎಂದು ಹೈಕೋರ್ಟ್ ಪ್ರಶ್ನಿಸಿದೆ. ಈ ಸಂಬಂಧ ನೋಟಿಸ್ ಜಾರಿ ಮಾಡಿದೆ.

ಜುಲೈ 1ರಿಂದ ನಡೆಸಲು ತೀರ್ಮಾನಿಸಿದ್ದ ಪರೀಕ್ಷೆಯನ್ನು ವಿಶ್ವವಿದ್ಯಾಲಯ 10 ದಿನದ ಅವಧಿಗೆ ಮುಂದೂಡಿತ್ತು. ಈ ಮಾಹಿತಿಯನ್ನು ಜೂನ್‍ 26ರ ವಿಚಾರಣೆಯ ವೇಳೆ ತಮ್ಮ ಗಮನಕ್ಕೆ ತರಲಿಲ್ಲ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸುಬ್ರಹ್ಮಣ್ಯಂ ಪ್ರಸಾದ್ ಅವರಿದ್ದ ನ್ಯಾಯಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ತೆರೆದ ಪುಸ್ತಕ ಪದ್ಧತಿಯಡಿ ಆನ್‍ಲೈನ್ ಪರೀಕ್ಷೆ ನಡೆಸುವ ವಿಶ್ವವಿದ್ಯಾಲಯದ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯ ಕೊನೆಯ ದಿನಾಂಕ ಜೂನ್ 26 ಆಗಿತ್ತು.

ADVERTISEMENT

‘ಜುಲೈ 1ರಿಂದ ಪರೀಕ್ಷೆ ನಡೆಸುವುದಾಗಿ ವಿಶ್ವವಿದ್ಯಾಲಯ ನೀಡಿದ ಹೇಳಿಕೆಯ ಆಧಾರದಲ್ಲಿ ಅರ್ಜಿಯನ್ನು ಇತ್ಯರ್ಥಗೊಳಿಸುವ ಸಂಬಂಧ ತೀರ್ಪು ನೀಡಲು ತಯಾರಿ ನಡೆಸುತ್ತಿದ್ದೆವು. ಇದರ ಮಧ್ಯೆಯೇ ಪರೀಕ್ಷೆ ಮುಂದೂಡಿದ ವಿಷಯ ಜೂನ್‌ 27ರಂದು ಪತ್ರಿಕಾ ವರದಿಗಳಿಂದ ನಮಗೆ ತಿಳಿಯಿತು’ ಎಂದು ನ್ಯಾಯಾಲಯ ಹೇಳಿದೆ.

ನಿಗದಿಯಾದ ದಿನದಂದೇ ಪರೀಕ್ಷೆಗೆ ಸಿದ್ಧತೆ ಆಗಿದೆ ಎಂದು ತಿಳಿಸಿದ ನಂತರ, ಏನಾದರೂ ಬದಲಾವಣೆ ಮಾಡಿದ್ದರೆ ಅದನ್ನು ಪೀಠದ ಗಮನಕ್ಕೆ ತರಬೇಕಾಗಿತ್ತು ಎಂದೂ ಕೋರ್ಟ್ ಹೇಳಿದೆ.

ವಿಶ್ವವಿದ್ಯಾಲಯದ ಕುಲಸಚಿವರ ತಾಯಿಗೆ ಕೋವಿಡ್‍ ದೃಢಪಟ್ಟಿದ್ದು, ಇಡೀ ಕುಟುಂಬ ಕ್ವಾರಂಟೈನ್‍ ನಲ್ಲಿ ಇರಬೇಕಾದ ಹಿನ್ನೆಲೆಯಲ್ಲಿ ಜೂನ್ 26ರ ಮಧ್ಯಾಹ್ನ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ವಿಶ್ವವಿದ್ಯಾಲಯದ ಪರ ವಕೀಲರು ಸಮರ್ಥನೆಯಾಗಿ ಪೀಠಕ್ಕೆ ತಿಳಿಸಿದರು.

ಆದರೆ, ಈ ಸಮರ್ಥನೆಯನ್ನು ಪೀಠ ಒಪ್ಪಿಕೊಳ್ಳಲಿಲ್ಲ. ಹೈಕೋರ್ಟ್ ಸಂಜೆ 4.30 ಗಂಟೆವರೆಗೂ ಕಾರ್ಯನಿರ್ವಹಿತ್ತಿರುತ್ತದೆ. ಹೀಗಾಗಿ, ಪೀಠದ ಗಮನಕ್ಕೆ ತರಬಹುದಾಗಿತ್ತು ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಈ ಕಾರಣದಿಂದ ದೆಹಲಿ ವಿಶ‍್ವವಿದ್ಯಾಲಯ ಮತ್ತು ಅದರ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿತು. ನಿಮ್ಮ ವಿರುದ್ಧ ಏಕೆ ನಿಂದನೆ ಮೊಕದ್ದಮೆ ದಾಖಲಿಸಬಾರದು ಎಂಬುದಕ್ಕೆ ಕಾರಣ ತಿಳಿಸುವಂತೆ ವಿಶ‍್ವವಿದ್ಯಾಲಯಕ್ಕೆ ಸೂಚಿಸಿ ನೋಟಿಸ್‍ ಜಾರಿ ಮಾಡಿತು. ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.