ADVERTISEMENT

ಮತಾಂತರ ನಿಷೇಧ ಕಾಯ್ದೆಯಡಿ ಬಂಧನವಾದ ವ್ಯಕ್ತಿ ವಿರುದ್ಧ ಬಲವಂತದ ಕ್ರಮ ಬೇಡ: ಕೋರ್ಟ್

ಉತ್ತರ ಪ್ರದೇಶ ಪೊಲೀಸರಿಗೆ ಅಲಹಾಬಾದ್‌ ಹೈಕೋರ್ಟ್‌ ನಿರ್ದೇಶನ

ಪಿಟಿಐ
Published 19 ಡಿಸೆಂಬರ್ 2020, 7:57 IST
Last Updated 19 ಡಿಸೆಂಬರ್ 2020, 7:57 IST
ಅಲಹಾಬಾದ್ ಹೈಕೋರ್ಟ್‌
ಅಲಹಾಬಾದ್ ಹೈಕೋರ್ಟ್‌   

ಅಲಹಾಬಾದ್‌: ಮತಾಂತರ ನಿಷೇಧ ಕಾಯ್ದೆಯಡಿ ಬಂಧನಕ್ಕೆ ಒಳಗಾಗಿರುವ ವ್ಯಕ್ತಿಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಉತ್ತರ ಪ್ರದೇಶ ಪೊಲೀಸರಿಗೆ ಅಲಹಾಬಾದ್‌ ಹೈಕೋರ್ಟ್‌ ಶನಿವಾರ ನಿರ್ದೇಶನ ನೀಡಿದೆ.

ಮತಾಂತರಗೊಳಿಸುವ ಉದ್ದೇಶದಿಂದ ಮಹಿಳೆಯನ್ನು ಮದುವೆಯಾಗಲು ಯತ್ನಿಸಿದ ಆರೋಪದ ಮೇಲೆ ನದೀಂ ಎಂಬುವವರ ವಿರುದ್ಧ ಮುಜಫ್ಫರ್‌ನಗರದ ಮನ್ಸೂರಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದನ್ನು ಪ್ರಶ್ನಿಸಿ ನದೀಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಂಕಜ್‌ ನಕ್ವಿ ಹಾಗೂ ವಿವೇಕ್‌ ಅಗರವಾಲ್‌ ಅವರಿರುವ ನ್ಯಾಯಪೀಠ ನಡೆಸಿತು.

ADVERTISEMENT

‘ಮತಾಂತರವನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಹೀಗಾಗಿ ನನ್ನ ಕಕ್ಷಿದಾರನ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ಅನ್ನು ರದ್ದುಗೊಳಿಸಬೇಕು’ ಎಂದು ನದೀಂ ಪರ ವಕೀಲ ಎಸ್‌.ಎಫ್‌.ಎ ನಕ್ವಿ ವಾದಿಸಿದ್ದರು.

‘ಅರ್ಜಿದಾರ ತನ್ನ ಪತ್ನಿಯನ್ನು ಮತಾಂತರಗೊಳಿಸಲು ಬಲವಂತ ಮಾಡಿದ್ದ ಎಂಬುದನ್ನು ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯಗಳು ನಮಗೆ ಕಾಣುತ್ತಿಲ್ಲ. ಅರ್ಜಿದಾರನ ಪತ್ನಿ ವಯಸ್ಕಳಾಗಿದ್ದು, ತನ್ನ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಅರಿತಿದ್ದಾಳೆ. ಅರ್ಜಿದಾರ ಮತ್ತು ಆಕೆ ಖಾಸಗಿತನದ ಹಕ್ಕು ಹೊಂದಿದ್ದಾರೆ. ತಮ್ಮ ಸಂಬಂಧದಿಂದಾಗುವ ಪರಿಣಾಮಗಳ ಅರಿವೂ ಅವರಿಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.